ಬೆಂಗಳೂರು: ಟಿಡಿಆರ್ ನೀಡಲು ಸರ್ಕಾರಕ್ಕೆ ಖರ್ಚೇನೂ ತಗಲುವುದಿಲ್ಲ, ಅದೊಂದು ಪ್ರಮಾಣ ಪತ್ರ ಅಷ್ಟೇ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ ಒಡೆಯರ್ ಅವರು ಶುಕ್ರವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಸರ್ಕಾರಕ್ಕೆ ಹಿನ್ನಡೆಯಾಗಿದೆ, ಹಾಗೆಂದು ಒಡೆಯರ್ ಮನೆತನಕ್ಕೆ ಖುಷಿಯೇನೂ ಆಗಿಲ್ಲ, ಕಾನೂನು ನ್ಯಾಯವನ್ನು ಎತ್ತಿ ಹಿಡಿದಿದೆ ಅಷ್ಟೇ ಎಂದು ಹೇಳಿದರು.
ಸರ್ಕಾರ ಕಾನೂನು ಪ್ರಕ್ರಿಯೆಯಂತೆ ಕೆಲಸ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಟಿಡಿಆರ್ ಕೊಡುವುದೆಂದರೆ ಅವರ ಖಜಾನೆಯಿಂದ ಒಂದು ರೂಪಾಯಿ ಕೊಡುವುದಲ್ಲ. ಕೇವಲ ಒಂದು ಸರ್ಟಿಫಿಕೇಟ್ ಕೊಡಬೇಕಾಗಿದೆ. ಇಷ್ಟು ಟಿಡಿಆರ್‌ನ ಮಾಲೀಕರು ನಾವು ಎಂದಷ್ಟೇ. ಅದರ ಮೂಲಕ ರಸ್ತೆ ಅಭಿವೃದ್ಧಿ, ಅಗಲಿಕರಣ ಮಾಡಬಹುದು. 2009ರಲ್ಲಿ ಟಿಡಿಆರ್ ಕೊಡುತ್ತೇವೆ ಎಂದು ಸರ್ಕಾರ ನಿರ್ಣಯ ಕೈಗೊಂಡಿತ್ತು. ಅಂದಿನಿಂದ ಇಂದಿನವರೆಗೆ 15 ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿಕೊಂಡು ಬಂದಿದ್ದೇವೆ.
ರಾಜ್ಯದಲ್ಲಿ ಎಲ್ಲೇ ಆಗಲಿ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯಬೇಕು, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎಂಬ ಯಾವುದೇ ದುರುದ್ದೇಶ ನಮಗೆ ಇಲ್ಲ. ರಾಜ್ಯ ಸರ್ಕಾರಕ್ಕೂ ಒಳ್ಳೆಯ ಹೆಸರು ಬರಬೇಕು, ಒಳ್ಳೆಯ ಕೆಲಸ ಮಾಡಬೇಕು ಎನ್ನುವುದು ನಮ್ಮ ಆಶಯವೂ ಆಗಿದೆ. 2009ರಲ್ಲಿ ಟಿಡಿಅರ್ ಕೊಟ್ಟು ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸರ್ಕಾರ ಒಪ್ಪಿಕೊಂಡಿತ್ತು. ರಾಜ್ಯ ಸರ್ಕಾರ ನಂತರ ಟಿಡಿಆರ್ ನೀಡಲು ನಿರಾಕರಿಸಿದೆ. ಸರ್ಕಾರ ಟಿಡಿಆರ್ ನೀಡದೆ, ಯಾವುದೇ ಪರಿಹಾರ ನೀಡದೆ ಬಳ್ಳಾರಿ ಮತ್ತು ಜಯಮಹಲ್ ರಸ್ತೆಗಳ ಅಭಿವೃದ್ಧಿ, ಅಗಲೀಕರಣ ಸಾಧ್ಯವಿಲ್ಲ ಎಂದರು.
ಬೆಂಗಳೂರಿನ ನಾಗರಿಕರಿಗೆ ದಿನ ನಿತ್ಯ ಸಮಸ್ಯೆ ಅಗುತ್ತಿದೆ. ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರವನ್ನು ನೀಡಿದಲ್ಲಿ 8000 ಕೋಟಿ ರು. ವೆಚ್ಚ ಮಾಡುವ ಬದಲು ಇದೊಂದು 120 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಗಲಿಕರಣ ಮಾಡಬಹುದು. ಅದರೆ ಜನರಿಗೆ ರಾಜ್ಯ ಸರ್ಕಾರ ಅನಾನುಕೂಲ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.