ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ಕೆ-ರೇರಾ) ಪೀಠ ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ನಿವೇಶನ ಹಸ್ತಾಂತರಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ 12,43,792 ರೂ. ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ನವೆಂಬರ್ 2023 ರಲ್ಲಿ ಅರ್ಕಾವತಿ ಲೇಔಟ್ ಅನ್ನು ಕೆ-ರೇರಾ ಅಡಿಯಲ್ಲಿ ನೋಂದಾಯಿಸಲು ತಿಳಿಸಿದ್ದರೂ ಅದನ್ನು ಮಾಡದ ಬಿಡಿಎಗೆ, ಮೊದಲು ನೋಂದಾಯಿಸುವಂತೆ ಆದೇಶಿಸಿದೆ.
ಫೆಬ್ರವರಿ 13 ರಂದು ಅಧ್ಯಕ್ಷ ರಾಕೇಶ್ ಸಿಂಗ್ ಮತ್ತು ಸದಸ್ಯ ಜಿ ರವೀಂದ್ರನಾಥ ರೆಡ್ಡಿ ಅವರು ಪರಿಹಾರ ಆದೇಶವನ್ನು ಅಂಗೀಕರಿಸಿದ್ದಾರೆ.
ವಿದ್ಯಾರಣ್ಯಪುರದಲ್ಲಿ ವಾಸಿಸುವ ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಸುತಂತಿರಾಜ್ ಅವರು ಬಿಡಿಎ ಆಯುಕ್ತರ ವಿರುದ್ಧ ರೇರಾ ಕಾಯ್ದೆಯ ಸೆಕ್ಷನ್ 31 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಸುತಂತಿರಾಜ್ ಅವರು 2006 ರಲ್ಲಿ ಬೆಂಗಳೂರು ಪೂರ್ವದ ಅಮಾನಿ ಬೈರತಿಕಾಣೆಯ 18ನೇ ಬ್ಲಾಕ್‌ನಲ್ಲಿ 60x40 ವಿಸ್ತೀರ್ಣದ ನಿವೇಶನವನ್ನು 7,5,100 ರೂ. ಪಾವತಿಸಿ ಖರೀದಿಸಿದ್ದರು. 358 ಸಂಖ್ಯೆಯ ನಿವೇಶನದ ಮಾರಾಟ ಪತ್ರವನ್ನು ಜನವರಿ 2, 2017 ರಂದು ನೋಂದಾಯಿಸಲಾಗಿತ್ತು.
"ನನ್ನ ನಿವೇಶನಕ್ಕೆ ಭೇಟಿ ನೀಡಲು ನಾನು ಪದೇ ಪದೇ ಮಾಡಿದ ಪ್ರಯತ್ನಗಳು ವ್ಯರ್ಥವಾಯಿತು. ಏಕೆಂದರೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಪಾವತಿಸಲಾಗಿಲ್ಲ ಎಂದು ಹೇಳಿ ಸೈಟ್ ಗೆ ಕಾಲಿಡಲು ನನಗೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಈ ಸಮಸ್ಯೆಯನ್ನು ಮಾರ್ಚ್ 2024 ರಲ್ಲಿ ಇತ್ಯರ್ಥಪಡಿಸಲಾಯಿತು ಮತ್ತು ಈಗ ಸೈಟ್‌ಗೆ ಮುಕ್ತವಾಗಿ ಭೇಟಿ ನೀಡಬಹುದು" ಎಂದು ಸುತಂತಿರಾಜ್ ಅವರು TNIEಗೆ ತಿಳಿಸಿದ್ದಾರೆ.
ಸೌಕರ್ಯಗಳ ಕೊರತೆಯು ನಿವೇಶನ ಖರೀದಿದಾರರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
"ಅರ್ಕಾವತಿ ಲೇಔಟ್‌ನ ಎಲ್ಲಾ 22 ಬ್ಲಾಕ್‌ಗಳು ಹಲವು ಸಮಸ್ಯೆಗಳಿಂದ ಬಳಲುತ್ತಿವೆ. ಆದರೆ 18ನೇ ಬ್ಲಾಕ್ ಇನ್ನೂ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗಿದೆ. ನಮಗೆ ಇಲ್ಲಿ ನೀರು ಅಥವಾ ವಿದ್ಯುತ್ ಸರಬರಾಜು ಸಹ ಇಲ್ಲ. ಅಸ್ತಿತ್ವದಲ್ಲಿರುವ ರಸ್ತೆಗಳಿಗೆ ಡಾಂಬರು ಹಾಕಿಲ್ಲ" ಎಂದಿದ್ದಾರೆ.
ನವೆಂಬರ್ 2, 2023 ರಂದು K-RERA ನೀಡಿದ ಮಧ್ಯಂತರ ಆದೇಶದಲ್ಲಿ ಎರಡು ವಾರಗಳಲ್ಲಿ RERA ಕಾಯ್ದೆ 2023 ರ ಸೆಕ್ಷನ್ 3 ರ ಅಡಿಯಲ್ಲಿ ಅರ್ಕಾವತಿ ಲೇಔಟ್ ಅನ್ನು ನೋಂದಾಯಿಸಲು ನಿರ್ದೇಶನ ನೀಡಿತ್ತು. ಆದರೆ ಬಿಡಿಎ ಇದುವರೆಗೂ ನೋಂದಾಯಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.