ಬೆಂಗಳೂರು: ಗ್ಯಾಸ್ ಕಟರ್ ಮೂಲಕ ಎಟಿಎಂ ಯಂತ್ರ ಕಟ್ ಮಾಡಿರುವ ಖದೀಮರು, ಎಟಿಎಂನಲ್ಲಿದ್ದ ಲಕ್ಷಾಂತರ ರೂಪಾಯಿಗಳನ್ನು ಹೊತ್ತು ಪರಾರಿಯಾಗಿರುವ ಘಟನೆ ಹೊಸಕೋಟೆಯಲ್ಲಿ ಶನಿವಾರ ನಡೆದಿದೆ.
ಹೊಸಕೋಟೆಯ ಸೂಲಿಬೆಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂನಲ್ಲಿ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಆಂಧ್ರ ಪ್ರದೇಶ ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿರುವ ಖದೀಮರು, ಕಾರಿನಿಂದ ಗ್ಯಾಸ್ ಕಟರ್ ಬಳಸಿ, ಎಟಿಎಂ ಮಷಿನನ್ನು ಕತ್ತರಿಸಿ ಅದರದಲ್ಲಿದ್ದ 10 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ದೋಚಿ, ಪರಾರಿಯಾಗಿದ್ದಾರೆ.
ತಮ್ಮ ಗುರುತು ಸಿಗಬಾರದೆಂಬ ಕಾರಣಕ್ಕೆ ಸಿಸಿ ಕ್ಯಾಮರಾಕ್ಕೆ ಕಪ್ಪು ಬಣ್ಣದ ಸ್ಪ್ರೇ ಹೊಡೆದಿದ್ದಾರೆ. ಘಟನೆಯ ಸಮಯದಲ್ಲಿ ಸ್ಥಳದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ.
ಘಟನೆಯ ವಿಡಿಯೋ ಪಕ್ಕದ ಕಟ್ಟಡದ ಮತ್ತೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳು ಕಾರಿನಲ್ಲಿ ಪರಾರಿಯಾಗುತ್ತಿರುವುದು ಕಂಡು ಬಂದಿದ್ದು, ಕಾರಿನ ಸಂಖ್ಯೆ ಕೂಡ ಕಂಡು ಬಂದಿದೆ. ಆರೋಪಿಗಳು ಕದ್ದ ವಾಹನವನ್ನು ಬಳಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ವೃತ್ತಿಪರ ಗ್ಯಾಂಗ್ ನಂತೆ ಕಾಣುತ್ತಿದ್ದು, ಆರೋಪಿಗಳ ಬಂಧನಕಕೆ ಎರಡಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.