ಬೆಂಗಳೂರು: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFes)ಉದ್ಘಾಟನೆ ವೇಳೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿರುವ 'ನಟ್ಟು ಬೋಲ್ಟ್ ಟೈಟ್ 'ಮಾಡುವೆ ಹೇಳಿಕೆ ಸರಿಯಿಲ್ಲ ಎಂಬ ಕರ್ನಾಟಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ವಿರುದ್ಧ ಶಾಸಕ ರವಿ ಗಣಿಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಗಣಿಗ, ಆಂಧ್ರ ಮೂಲದ ನರಸಿಂಹಲು ಡಿಸಿಎಂ ಮಾತು ಸರಿ ಇಲ್ಲ ಎಂದಿದ್ದಾರೆ. ಅವರಿಗೆ ಇದೇ ಲಾಸ್ಟ್ ವಾರ್ನಿಂಗ್, ಸಿನಿಮಾಗಳಿಗೆ ಸಬ್ಸಿಡಿ ನೀಡಬೇಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳುತ್ತೇನೆ ಎಂದರು.
ಕಳೆದ ಬಾರಿಯ ಫಿಲಂ ಫೆಸ್ಟಿವಲ್ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಕರೆಯಲು ಶಾಸಕರು ಕರೆಯಲು ಹೋದಾಗ ಟೈಮ್ ಇಲ್ಲ ಅಂತಾ ಹೇಳಿದ್ದರು. ಅಂಥವರಿಗೆ ಏನು ಮಾಡಬೇಕು ಎಂದು ಕೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನಿನ್ನೆಯೂ ಮೈಸೂರಿನಲ್ಲಿ ಈ ವಿಚಾರ ಕುರಿತು ಮಾತನಾಡಿದ ರವಿ ಗಣಿಗ, ಕನ್ನಡಿಗರಿಂದಲೇ ಇವರೆಲ್ಲ ಸ್ಟಾರ್ ಆಗಿರುವುದು, ಸಿನಿಮಾಗಳಿಗೆ ಸಬ್ಸಿಡಿ ಬೇಕು ಅಂದಾಗ ಸರ್ಕಾರದ ಬಳಿಗೆ ಬರುತ್ತಾರೆ. ಆದರೆ, ಕನ್ನಡದ ನೆಲ, ಜಲ, ಭಾಷೆ ಬೇಡವೇ? ಆಹ್ವಾನ ಕಳುಹಿಸಿದ್ದರೆ ಏಕೆ ಬರುವುದಿಲ್ಲ? ಎಂದು ಪ್ರಶ್ನಿಸಿದರು.
ಡಾ. ರಾಜ್ ಕುಮಾರ್ , ಅಂಬರೀಶ್, ವಿಷ್ಣುವರ್ಧನ್ ಅವರೆಲ್ಲ ರಾಜ್ಯೋತ್ಸವ ಸಮಾರಂಭಗಳಿಗೆ ಬರುತ್ತಿದ್ದರು. ಅಭಿಮಾನಿಗಳು ಅವರನ್ನು ಹೊತ್ತು ಮೆರೆಸಿದ್ದಕ್ಕೆ ಅವರು ಸ್ಟಾರ್ ಗಳಾಗಿದ್ದು, ಈಗಿನ ನಟರಲ್ಲಿ ದರ್ಶನ್ ಹೊರತುಪಡಿಸಿ ಬೇರೆ ಯಾರು ಬರುವುದಿಲ್ಲ. ಇದೆಲ್ಲವನ್ನೂ ನಾವು ಪ್ರಶ್ನೆ ಮಾಡಬಾರದ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಡಿಕೆ ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಕಲಾವಿದರನ್ನು ಅಪಮಾನ ಮಾಡುವ ಕೆಲಸ ಮಾಡಿರುವ ಡಿಕೆ ಶಿವಕುಮಾರ್ ಮೊದಲು ಕಾಂಗ್ರೆಸ್ ನಲ್ಲಿ ನಟ್ಟು ಬೋಲ್ಟ್ ಟೈಟ್ ಮಾಡಲಿ. ಹೀಗೆ ಹುಚ್ಚು ಹುಚ್ಚಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ತಾಕೀತು ಮಾಡಿದರು.