ಸಚಿವ ಬೈರತಿ ಸುರೇಶ್‌ 
ರಾಜ್ಯ

ಖಾಸಗಿಯವರು ಭೂಮಿ ಖರೀದಿಸಿ ಬಡಾವಣೆ ನಿರ್ಮಿಸುತ್ತಿರುವಾಗ ಪ್ರಾಧಿಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ: ಬೈರತಿ ಸುರೇಶ್

ಖಾಸಗಿಯವರು ಭೂಮಿಯನ್ನು ಖರೀದಿಸಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರುವಾಗ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಅದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಬೆಂಗಳೂರು: ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಗೆ ಬರುವ ಎಲ್ಲಾ ಖಾಸಗಿ ವಸತಿ ಬಡಾವಣೆಗಳ ಅನುಮೋದನೆಗೆ ಇನ್ನು ಮುಂದೆ ಸರ್ಕಾರದ ಸಮ್ಮತಿ ಪಡೆಯಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನಾ ಸಚಿವ ಬೈರತಿ ಸುರೇಶ್ ಸೋಮವಾರ ಘೋಷಿಸಿದ್ದಾರೆ.

ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳು ಸಾಧಿಸಿರುವ ಪ್ರಗತಿ ಕುರಿತಂತೆ ವಿಕಾಸಸೌಧದಲ್ಲಿ ಸೋಮವಾರ ಪರಿಶೀಲನಾ ಸಭೆ ನಡೆಸಿದ ಸಚಿವರು, ಖಾಸಗಿಯವರು ಭೂಮಿಯನ್ನು ಹೊಂದಿಸಿ/ಖರೀದಿಸಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರುವಾಗ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಅದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯನ್ನು ರಚಿಸಿರುವುದು ಪ್ರಾಧಿಕಾರಗಳು ಬಡಾವಣೆಗಳನ್ನು ನಿರ್ಮಿಸಿ ರಾಜ್ಯದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನಗಳು ಸಿಗುವಂತಾಗಲಿ ಎನ್ನುವ ಉದ್ದೇಶದಿಂದಲೇ ಹೊರತು ಖಾಸಗಿ ಬಡಾವಣೆಗಳ ನಿರ್ಮಾಣ ಮತ್ತು ನಕ್ಷೆಗೆ ಅನುಮೋದನೆ ನೀಡಲು ಅಲ್ಲ ಎಂದರು.

ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಒಂದು ರೀತಿಯ ನಿಯಮಗಳು ಅನ್ವಯಿಸಿದರೆ ಸರ್ಕಾರದ ವತಿಯಿಂದ (ನಗರಾಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ) ನಿರ್ಮಾಣಕ್ಕೆ ಒಂದು ರೀತಿಯ ನಿಯಮಗಳಿವೆ. ಇದು ತಾರತಮ್ಯದಿಂದ ಕೂಡಿದೆ. ಹೀಗಾಗಿ ಎಲ್ಲದಕ್ಕೂ ಅನ್ವಯವಾಗುವಂತೆ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದರು.

ರೈತರ ಮನವೊಲಿಸಿ ಅವರಿಂದ ಜಮೀನು ಪಡೆದು 50:50ರ ಅನುಪಾತದ ಅಡಿಯಲ್ಲಿ ಅಭಿವೃದ್ಧಿಪಡಿಸಿ ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡುವುದು ಪ್ರಾಧಿಕಾರಗಳ ಕೆಲಸ. ಅದನ್ನು ಬಿಟ್ಟು ಖಾಸಗಿ ಬಡಾವಣೆ ನಿರ್ಮಾಣ ಮತ್ತು ನಕ್ಷೆಗೆ ಅನುಮೋದನೆ ನೀಡುವುದಲ್ಲ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯನ್ವಯ ನಾಗರಿಕ ಸೌಲಭ್ಯ ನಿವೇಶನ ಮೀಸಲು, ಒಳಚರಂಡಿ ವ್ಯವಸ್ಥೆ, ಉದ್ಯಾನವನ, ರಸ್ತೆಗಳ ನಿರ್ಮಾಣ ನಿಯಮಾವಳಿಗಳಂತೆ ಖಾಸಗಿ ಬಡಾವಣೆಗಳಲ್ಲಿ ತರಲು ಸಾಧ್ಯವಿದೆ. ಸರ್ಕಾರದ ವತಿಯಿಂದ ಅಂದರೆ ನಗರಾಭಿವೃದ್ಧಿ ಪ್ರಾಧಿಕಾರಗಳು /ನಗರ ಯೋಜನಾ ಪ್ರಾಧಿಕಾರಗಳ ವತಿಯಿಂದ ಬಡಾವಣೆಗಳು ನಿರ್ಮಾಣವಾದರೆ, ಆ ಜಮೀನುಗಳಲ್ಲಿ ತಕಾರರು/ವ್ಯಾಜ್ಯಗಳು ಇರುವುದಿಲ್ಲ. ನಕ್ಷೆ ಕಾನೂನು ರೀತಿಯಲ್ಲಿ ಇರುತ್ತದೆ. ಇದರ ಜೊತೆಗೆ ಸರ್ಕಾರದ/ನಗರಾಭಿವೃದ್ಧಿ ಪ್ರಾಧಿಕಾರಗಳ ಮೇಲೆ ಜನ ಸಾಮಾನ್ಯರಿಗೆ ಗೌರವ ಹೆಚ್ಚಾಗುತ್ತದೆ" ಎಂದು ತಿಳಿಸಿದರು.

ರಾಜ್ಯದಲ್ಲಿ ಖಾಸಗಿಯವರು ಬಡಾವಣೆಗಳನ್ನು ನಿರ್ಮಿಸಿ ಸಾವಿರಾರು ನಿವೇಶನಗಳನ್ನು ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವಾಗ ಪ್ರಾಧಿಕಾರಗಳ ಆಯುಕ್ತರು ಮತ್ತು ನಗರ ಯೋಜಕ ಸದಸ್ಯರಾದ ತಮ್ಮ ಕೈಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲ?. ಜಮೀನು ಕೊಡಲು ಮುಂದೆ ಬರುವ ರೈತರನ್ನು ಸಂಪರ್ಕಿಸಿ ಇಲ್ಲದೆ ಇದ್ದಾಗ ನೀವೇ ಮುಂದೆ ಹೋಗಿ ರೈತರ ಮನವೊಲಿಸಿ ಜಮೀನನ್ನು ಪಡೆಯಿರಿ. ಇನ್ನು ಯಾವುದೂ ಇಲ್ಲದ ಸಂದರ್ಭದಲ್ಲಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರದಿಂದ ಅವಕಾಶವಿದೆ. ಇವುಗಳನ್ನು ಬಳಸಿಕೊಂಡು ಬಡಾವಣೆಗಳನ್ನು ನಿರ್ಮಾಣ ಮಾಡಬೇಕು" ಎಂದು ತಾಕೀತು ಮಾಡಿದರು.

"ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳಲ್ಲಿ ಇರುವ ಹಣವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಹಣವಿದೆ ಎಂದು ಬಡ್ಡಿಗಾಗಿ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಬಾರದು. ಪ್ರಾಧಿಕಾರಗಳಲ್ಲಿರುವ ಹಣವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡು ಬಡಾವಣೆಗಳನ್ನು ನಿರ್ಮಿಸಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಮತ್ತೆ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಅಷ್ಟರಲ್ಲಿ ಪಗ್ರತಿ ಸಾಧಿಸಿರಬೇಕು" ಎಂದು ಸಭೆಯಲ್ಲಿ ಹಾಜರಿದ್ದ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು ಮತ್ತು ನಗರ ಯೋಜಕ ಸದಸ್ಯರು/ಕಾರ್ಯದರ್ಶಿಗಳಿಗೆ ಸಚಿವರು ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT