ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ ಬೆಂಗಳೂರಿನ ತ್ವರಿತಗತಿ ವಿಶೇಷ ನ್ಯಾಯಾಲಯ (ಎಫ್‌ಟಿಎಸ್‌ಸಿ) ಗುರುವಾರ ವ್ಯಕ್ತಿಯೊಬ್ಬನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಾಧೀಶರಾದ ಎನ್. ನರಸಮ್ಮ ಅವರು, ಅಪರಾಧಿಗೆ 10,000 ರೂ. ದಂಡವನ್ನೂ ವಿಧಿಸಿದ್ದು, ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.
ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2024ರ ಮೇ 10 ರಂದು ಈ ಘಟನೆ ನಡೆದಿತ್ತು. ಆರೋಪಿಯು ಕುಟುಂಬ ಸದಸ್ಯರು ಯಾರೂ ಇಲ್ಲದ ಸಮಯದಲ್ಲಿ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದೊಯ್ದು ಕೃತ್ಯ ಎಸಗಿದ್ದ. ನಂತರ ಆರೋಪಿಯು ಬಾಲಕಿಯನ್ನು ಬೆದರಿಸಿ, ತನಗೆ ಬೇಕಾದಾಗ ತನ್ನ ಮನೆಗೆ ಬರುವಂತೆ ಹೇಳಿ ನಾಲ್ಕೈದು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ಶೋಷಣೆಯ ನಂತರ ಬಾಲಕಿ ಗರ್ಭಿಣಿಯಾಗಿದ್ದಾಳೆ. ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿದ್ದಾಗ ಘಟನೆ ಬಗ್ಗೆ ಸಂತ್ರಸ್ತೆಯ ತಂದೆಗೆ ತಿಳಿದಿದೆ. ಬಳಿಕ ಆರೋಪಿ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದರು.
ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 18 ವರ್ಷದ ಆರೋಪಿಯನ್ನು 2024ರ ಮೇ 13ರಂದು ಬಂಧಿಸಲಾಯಿತು. ಈ ಪ್ರಕರಣದ ವಿಚಾರಣೆಯನ್ನು ಐದನೇ ಎಫ್‌ಟಿಎಫ್‌ಸಿ ನ್ಯಾಯಾಲಯ ನಡೆಸಿತು.