ಗೃಹ ಸಚಿವ ಜಿ ಪರಮೇಶ್ವರ್ 
ರಾಜ್ಯ

ಮಚ್ಚು, ಲಾಂಗ್ ತೋರಿಸಿದರೆ ಗೂಂಡಾ ಕಾಯ್ದೆ: ರಾಜ್ಯ ಸರ್ಕಾರ ಎಚ್ಚರಿಕೆ

ಕಳೆದ 2-3 ವರ್ಷಗಳ ಅವಧಿಯಲ್ಲಿ ನಡೆದಿರುವ ವಿವಿಧ ಅಪರಾಧ ಪ್ರಕರಣಗಳು, ಕೈಗೊಂಡ ಕ್ರಮ, ಅಪರಾಧಿಗಳ ಬಂಧನ ಕುರಿತು ಅಂಕಿ ಅಂಶಗಳ ಸಹಿತ ವಿವರಿಸಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಅವಕಾಶ ನೀಡುವುದಿಲ್ಲ.

ಬೆಂಗಳೂರು: ಮಚ್ಚು, ಲಾಂಗ್ ತೋರಿಸುವವರು, ಕಾನಾನು ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ಜೆಡಿಎಸ್ ನಾಯಕ ಎಸ್.ಎಲ್.ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಕಳೆದ 2-3 ವರ್ಷಗಳ ಅವಧಿಯಲ್ಲಿ ನಡೆದಿರುವ ವಿವಿಧ ಅಪರಾಧ ಪ್ರಕರಣಗಳು, ಕೈಗೊಂಡ ಕ್ರಮ, ಅಪರಾಧಿಗಳ ಬಂಧನ ಕುರಿತು ಅಂಕಿ ಅಂಶಗಳ ಸಹಿತ ವಿವರಿಸಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ವ್ಹೀಲಿಂಗ್ ಮಾಡುವುದಲ್ಲದೆ ಚಾಕು, ಚೂರಿ ಹಾಗೂ ಲಾಂಗ್ ಹಿಡಿದುಕೊಂಡು ಓಡಾಡಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ, 1,342 ಪ್ರಕರಣಗಳು ದಾಖಲಾಗಿದ್ದು, 1,046 ವ್ಯಕ್ತಿಗಳನ್ನು ಬಂಧಿಸಲಾಗಿದೆ.ರಾಜ್ಯದೆಲ್ಲೆಡೆ ದಾಖಲಾದ ಒಟ್ಟು ವ್ಹೀಲಿಂಗ್ ಪ್ರಕರಣಗಳಲ್ಲಿ ಬೆಂಗಳೂರು ನಗರದಲ್ಲಿ 893 ಪ್ರಕರಣ ದಾಖಲಾಗಿದ್ದು, 788 ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದ ಇತರೆಡೆ 449 ಪ್ರಕರಣ ದಾಖಲಾಗಿದ್ದು, 258 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದೇವೆಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಸಮಾಜದ ಶಾಂತಿ ಹಾಳು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಗಲಭೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಗೂಂಡಾ ಕಾಯ್ದೆಯಡಿ ಮೂರು ವರ್ಷಗಳಲ್ಲಿ 139 ಗೂಂಡಾಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಬೀಟ್ ವ್ಯವಸ್ಥೆ ಹೆಚ್ಚಿಸಲಾಗಿದೆ. ಹೊಯ್ಸಳ ಗಸ್ತು ಕರ್ತವ್ಯ ಬಲಪಡಿಸಲಾಗಿದೆ. ನಗರದ ಯಾವುದೇ ಸ್ಥಳದಿಂದ 112ಗೆ ಕರೆ ಮಾಡಿದರೆ ಸರಾಸರಿ 9 ನಿಮಿಷಗಳಲ್ಲಿ ಸ್ಥಳಕ್ಕೆ ಹೊಯ್ಸಳ ಬರುವ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ನಗರ ಸುರಕ್ಷತೆ ದೃಷ್ಟಿಯಿಂದ 1,640 ಕಡೆಗಳಲ್ಲಿ 7,500 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ನಗರದ ಪ್ರಮುಖ ಜಂಕ್ಷನ್​​ಗಳಲ್ಲಿ ಎಐ ಕ್ಯಾಮರಾ ಹಾಕಲಾಗಿದೆ. ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡು ಆರೋಪಿಗಳ ಹೆಡೆಮುರಿ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ ಎಂದು ವಿವರಿಸಿದರು.

ಬೆಂಗಳೂರು ಮಾತ್ರವಲ್ಲದೆ ರಾಜ್ಯದಲ್ಲಿ ಸೈಬರ್ ಅಪರಾಧಗಳು ದಿನೇ ದಿನೆ ಹೆಚ್ಚಾಗುತ್ತಿವೆ. ದಿನನಿತ್ಯ ಕೋಟ್ಯಂತರ ರೂಪಾಯಿ ಹಣವನ್ನ ಜನರು ಕಳೆದುಕೊಳ್ಳುತ್ತಿದ್ದಾರೆ. 2022ರಲ್ಲಿ 10,575 ಸೈಬರ್ ಪ್ರಕರಣಗಳು ದಾಖಲಾದರೆ, 2024ರ ಅಂತ್ಯಕ್ಕೆ 21,984 ಪ್ರಕರಣಗಳು ದಾಖಲಾಗಿವೆ. ಸೈಬರ್ ವಂಚನೆ ನಿಯಂತ್ರಣಕ್ಕಾಗಿ ಮೊದಲ ಬಾರಿಗೆ ಪ್ರತ್ಯೇಕ ಡಿಜಿಪಿ ಹುದ್ದೆ ಸೃಷ್ಟಿಸಲಾಗಿದೆ. ಇವರ ನೇತೃತ್ವದಲ್ಲಿ ಓರ್ವ ಐಜಿಪಿ, ಏಳು ಮಂದಿ ಎಸ್ಪಿ ಸೇರಿ ಇನ್ನಿತರ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT