ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್ 2025-26ರಲ್ಲಿ 500 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 2,500 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.
ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ ಎಂಬ ಆರೋಪ ಕೇಳಿಬರುತ್ತಲೇ ಇದೆ. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ನಿವಾರಿಸಲು 53 ಲಕ್ಷ ಮಕ್ಕಳಿಗೆ ವಾರದಲ್ಲಿ ಆರು ದಿನ ಬಾಳೆಹಣ್ಣು ಮತ್ತು ಮೊಟ್ಟೆ ವಿತರಿಸಲಾಗುತ್ತದೆ.
ಪ್ರಸ್ತುತ ಶಾಲಾ ಮಕ್ಕಳಿಗೆ ವಾರಕ್ಕೆ 3 ದಿನ ನೀಡಲಾಗುತ್ತಿದ್ದ ರಾಗಿ ಆರೋಗ್ಯ ಮಿಶ್ರಣವನ್ನು ಇನ್ನು ಮುಂದೆ ವಾರಕ್ಕೆ 5 ದಿನ ನೀಡಲಾಗುವುದು. ಟ್ರಸ್ಟ್ ನಡೆಸುವ 100 ಕೋಟಿ ರೂಪಾಯಿಗಳ ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಶೇಕಡಾ 25ರಷ್ಟು ಹಣ ನೀಡಲಿದೆ.
ಶಾಲೆಗಳ ಮೇಲ್ದರ್ಜೆಗೆ ಬಜೆಟ್ ನಲ್ಲಿ ಹಣ ಮೀಸಲು
ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ಮೇಲ್ದರ್ಜೆಗೆ ಈ ಬಾರಿಯ ಬಜೆಟ್ ನಲ್ಲಿ 725 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಆ ಮೂಲಕ ಹೊಸ ತರಗತಿಗಳು, ಶೌಚಾಲಯಗಳು ಮತ್ತು ದುರಸ್ತಿ ಕಾರ್ಯ ನಡೆಸಲಾಗುತ್ತದೆ. 50 ಕೋಟಿ ರೂಪಾಯಿಗಳಲ್ಲಿ ಅಗತ್ಯ ಪೀಠೋಪಕರಣಗಳ ದುರಸ್ತಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷೆ ಕಲಿಕೆ
ಇಂದು ಕಲಿತು ಹೊರಗೆ ಉದ್ಯೋಗಕ್ಕೆ ಹೋಗುವ ಸಂದರ್ಭದಲ್ಲಿ ಇಂಗ್ಲಿಷ್ ಸಂವಹನದ ಅಗತ್ಯತೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ ಮಟ್ಟದಿಂದಲೇ ಮಕ್ಕಳಲ್ಲಿ ಇಂಗ್ಲಿಷ್ ಕಲಿಕೆಯ ಪರಿಚಯವಾಗಲು 4 ಸಾವಿರ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷೆಗಳನ್ನು ಪರಿಚಯಿಸಲಾಗುತ್ತದೆ. ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ಅವರ ಮಾತೃಭಾಷೆ ಎರಡರಲ್ಲೂ ನಿರರ್ಗಳತೆಯಿಂದ ಮಾತನಾಡಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ.
ಅತಿಥಿ ಉಪನ್ಯಾಸಕರು
ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳ ಅತಿಥಿ ಶಿಕ್ಷಕರ ಮಾಸಿಕ ಗೌರವಧನವನ್ನು ಈ ವರ್ಷ 2,000 ರೂ ಹೆಚ್ಚಳ ಮಾಡಲಾಗಿದ್ದು, ಮಧ್ಯಾಹ್ನ ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ.
ಐ ಕೋಡ್ ಲ್ಯಾಬ್
ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನದೊಂದಿಗೆ ಮುಂದುವರಿಯಲು ಐ-ಕೋಡ್ ಲ್ಯಾಬ್ಸ್ ಸರ್ಕಾರಿ ಶಾಲೆಗಳಲ್ಲಿ ಕೋಡಿಂಗ್ ನ್ನು ಪರಿಚಯಿಸಲಾಗುತ್ತದೆ. 63 ಐಸಿಟಿ-ಆಧಾರಿತ ಶಾಲೆಗಳು ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿದ್ದು, 756 ಸ್ಪೋಕ್ ಸ್ಕೂಲ್ ಗಳಿಗೆ ಪ್ರಯೋಜನವಾಗಲಿದೆ.
ಬಳ್ಳಾರಿಯಲ್ಲಿರುವ ಸರ್ಕಾರಿ ಶ್ರವಣದೋಷವುಳ್ಳ ಶಾಲೆಯನ್ನು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.