ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ 
ರಾಜ್ಯ

Karnataka Budget 2025 Live Updates: ಬಿಸಿಯೂಟ ಕಾರ್ಯಕರ್ತೆಯರ ಗೌರವಧನ 1 ಸಾವಿರ ರೂ ಹೆಚ್ಚಳ; ಗ್ಯಾರಂಟಿ ಯೋಜನೆಗಳಿಗೆ 51,300 ಕೋಟಿ ರೂ ಅನುದಾನ

2025-26ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, 16ನೇ ಬಾರಿ ಬಜೆಟ್ ಮಂಡನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಬರೆದಿದ್ದಾರೆ.

ಬಜೆಟ್ ಮಂಡನೆಗೆ ಕ್ಷಣಗಣನೆ

2025-26ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, 16ನೇ ಬಾರಿಗೆ ಬಜೆಟ್ ಮಂಡನೆಗೆ ಮಾಡಿ ದಾಖಲೆ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಜ್ಜಾಗಿದ್ದಾರೆ.

1995ರಲ್ಲಿ. ಎಚ್.ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಮೊದಲ ಬಜೆಟ್‌ ಮಂಡಿಸಿದ್ದರು. 1995 ಮತ್ತು 1996ರಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ, 1997, 1998, 1999ರಲ್ಲಿ ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿದ್ದರು.

2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು 2013, 2014, 2015, 2016, 2017 ಮತ್ತು 2018 (ಲೇಖಾನುದಾನ) ಹೀಗೆ ನಿರಂತರವಾಗಿ ಆರು ಬಾರಿ ಬಜೆಟ್‌ ಮಂಡಿಸಿದ್ದರು. 2018ರಲ್ಲಿ ಮಂಡಿಸಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಆಗಿರಲಿಲ್ಲ. ಇದು ಅವರು ಮಂಡಿಸಿದ 13ನೇ ಬಜೆಟ್‌ ಆಗಿತ್ತು.

2023, ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರು 14ನೇ ಬಜೆಟ್‌ ಮಂಡಿಸಿ ಹೊಸ ದಾಖಲೆ ಬರೆದಿದ್ದರು. ಇದೀಗ 2025-26ನೇ ಸಾಲಿನ 16ನೇ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.

ರಾಹು ಕಾಲಕ್ಕೂ ಮುನ್ನ ಸಿಎಂ ಬಜೆಟ್ ಮಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹು ಕಾಲಕ್ಕೂ ಮುನ್ನ ಬಜೆಟ್ ಮಂಡನೆ ಆರಂಭಿಸಲು ನಿರ್ಧರಿಸಿದ್ದು, 10.15ಕ್ಕೆ ಬಜೆಟ್‌ ಮಂಡನೆ ಪ್ರಾರಂಭಿಸಲಿದ್ದಾರೆಂದು ತಿಳಿದುಬಂದಿದೆ.

ಬೆಳಿಗ್ಗೆ 10.30ಕ್ಕೆ ರಾಹುಕಾಲ ಆರಂಭವಾಗಲಿದ್ದು, ಅದಕ್ಕೆ ಮೊದಲೇ ಅಂದರೆ 10.15ಕ್ಕೆ ಬಜೆಟ್‌ ಮಂಡನೆಯನ್ನು ಶುರು ಮಾಡಲಿದ್ದಾರೆ.

ಬಜೆಟ್ ಪ್ರತಿ ಸಿಎಂಗೆ ಹಸ್ತಾಂತರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಣಕಾಸು ಅಧಿಕಾರಿಗಳು ಬಜೆಟ್‌ ಪ್ರತಿಗಳನ್ನು ಹಸ್ತಾಂತರಿಸಿದ್ದು, ದಾಖಲೆಯ ಬಜೆಟ್‌ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕಾರ್ಯದರ ಪಿ.ಸಿ. ಜಾಫರ್ ಬಜೆಟ್ ಪ್ರತಿ ಇರುವ ಸೂಟ್ ಕೇಸ್ ಹಸ್ತಾಂತರಿಸಿದರು.

ಈ ವೇಳೆ ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ .ಕೆ‌. ಅತೀಕ್ , ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಉಪಸ್ಥಿತರಿದ್ದರು.

ವಿಧಾನಸೌಧಕ್ಕೆ ಸಿಎಂ ಆಗಮನ

ಹಣಕಾಸು ಅಧಿಕಾರಿಗಳಿಂದ ಬಜೆಟ್ ಪ್ರತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸೌಧಕ್ಕೆ ಆಗಮಿಸಿದ್ದು, ಇನ್ನು ಕೆಲವೇ ನಿಮಿಷಗಳಲ್ಲಿ ಬಜೆಟ್ ಮಂಡನೆ ಆರಂಭಿಸಲಿದ್ದಾರೆ.

ಸಿಎಂ ಬಜೆಟ್ ಕುರಿತು BJP ಟೀಕೆ

ಪ್ರಗತಿಯ ಗ್ಯಾರಂಟಿ: ಕಾಂಗ್ರೆಸ್

ನನ್ನ ರಾಜಕೀಯ ಜೀವನದ 16ನೇ ಬಜೆಟ್ ಮಂಡನೆಗೆ ಸಿದ್ಧನಾಗಿದ್ದೇನೆ: ಸಿಎಂ

ನನ್ನ ರಾಜಕೀಯ ಜೀವನದ 16ನೇ ಬಜೆಟ್ ಮಂಡನೆಗೆ ಈ ದಿನ ಸಿದ್ಧನಾಗಿದ್ದೇನೆ. ಹದಿನಾರು ಬಾರಿ ಈ ರಾಜ್ಯದ ಬಜೆಟ್ ಮಂಡನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ಸಮಸ್ತ ಜನತೆಗೆ ನಾನು ಕೃತಜ್ಞ.

ಬುದ್ಧ, ಬಸವ, ಗಾಂಧಿ, ಅಂಬೇಡ್ಕರರ ಆಶಯಗಳಲ್ಲಿ ನಂಬಿಕೆಯನ್ನಿಟ್ಟು, ಅದರಂತೆ ನಡೆಯುತ್ತಿರುವ ನಾವು ಈ ಬಜೆಟ್ ಮೂಲಕ ಸಮಸಮಾಜದ ಕನಸನ್ನು ನನಸಾಗಿಸುವತ್ತ ಮತ್ತಷ್ಟು ದೃಢಹೆಜ್ಜೆಯನ್ನಿಡುವ ಪ್ರಯತ್ನ ಮಾಡಿದ್ದೇವೆ. ಮುಂದಿನ ಒಂದು ವರ್ಷಗಳ‌ ಕಾಲದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಈ ಬಜೆಟ್ ದಾರಿದೀಪವಾಗಲಿದೆ ಎಂಬುದು ನಿಸ್ಸಂಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಬಜೆಟ್ ಪ್ರಸ್ತಾವಕ್ಕೆ ಅನುಮೋದನೆ

ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, 2025-26ನೇ ಸಾಲಿನ ರಾಜ್ಯ ಬಜೆಟ್ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ವ್ಹೀಲ್ ಚೇರ್ ನಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಸಿಎಂ

ಸಿಎಂ ಸಿದ್ದರಾಮಯ್ಯ 16ನೇ ಬಜೆಟ್‌ ಮಂಡನೆ ಆರಂಭ

2025-26ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ; ವಲಯವಾರು ವಿಂಗಡಣೆ ಮಾಡಿ ಬಜೆಟ್ ಮಂಡನೆ

2025-26ನೇ ಸಾಲಿನ ರಾಜ್ಯ ಬಜೆಟ್​ ಗಾತ್ರ 4 ಲಕ್ಷ ಕೋಟಿ ರೂಪಾಯಿ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಮುಖ್ಯಮಂತ್ರಿ ಸಿದ್ಜರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ಟನಲ್‌ ಯೋಜನೆಗೆ 40 ಸಾವಿರ ಕೋಟಿ ರೂ. ಘೋಷಣೆ

ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಅಭಿವೃದ್ಧಿಗೆ ಬದ್ಧವಾಗಿದ್ದು, 2030ರ ವೇಳೆಗೆ 20 ಲಕ್ಷ ಉದ್ಯೋಗ ಸೃಜಿಸುವ ಗುರಿ ಹೊಂದಿದೆ. ಸರ್ಕಾರದ ವಿವಿಧ ಫಲಾನುಭವಿಗಳಿಗೆ ಮಧ್ಯವರ್ತಿಗಳಿಲ್ಲದೆ 1 ಲಕ್ಷ ಕೋಟಿ ರೂ.ಹಣವನ್ನು ವರ್ಗಾಯಿಸಲಾಗಿದೆ. ಕಲ್ಯಾಣ ಇಲಾಖೆಗಳ ಮೂಲಕ ಅಸಾಹಯಕರನ್ನು ಬಲಗೊಳಿಸಲು ಈ ಆಯವ್ಯಯವೂ ನೆರವಾಗಲಿದೆ.

ಬಿಸಿಯೂಟ ಕಾರ್ಯಕರ್ತೆಯರ ಗೌರವಧನ 1 ಸಾವಿರ ಹೆಚ್ಚಳ

ಪ್ರಸಕ್ತ ಸಾಲನ ಬಜೆಟ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಸಿಯೂಟ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ ನೀಡಿದ್ದು, ಬಿಸಿಯೂಟ ಕಾರ್ಯಕರ್ತೆಯರ ಗೌರವಧನ 1 ಸಾವಿರ ಹೆಚ್ಚಳ ಮಾಡಿದ್ದಾರೆ. ಸರ್ಕಾರಿ-ಪ್ರೌಢ ಶಾಲೆ ಅತಿಥಿ ಶಿಕ್ಷಕರ ಗೌರವಧನವನ್ನೂ 2 ಸಾವಿರ ರೂ. ಹೆಚ್ಚಳ ಮಾಡಿದ್ದಾರೆ. ಇದೇ ವೇಳೆ ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು 1,500 ರೂ. ಕೋಟಿ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.

ಬ್ರ್ಯಾಂಡ್ ಬೆಂಗಳೂರು

ನಗರಾಭಿವೃದ್ಧಿ, ಕೃಷಿ, ಶಿಕ್ಷಣಕ್ಕೆ ಬಜೆಟ್​ನಲ್ಲಿ ಆದ್ಯತೆ. ಜೊತೆಗೆ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಬೆಂಗಳೂರಿಗೆ ಎಲ್ಲ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಬಜೆಟ್​ನಲ್ಲಿ 5 ಗ್ಯಾರಂಟಿ ಯೋಜನೆಗಳ ಜೊತೆಗೆ 6 ಅಭಿವೃದ್ಧಿ ಆಯಾಮ ಗುರುತಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಜೊತೆಗೆ ಗ್ರಾಮೀಣ ಅಭಿವೃದ್ಧಿಯೆ ಒತ್ತು ನೀಡುತ್ತೇವೆ.

ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟಿ ಅನುದಾನ.

1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಗೆ 440 ಕೋಟಿ ರೂ. ಸಹಾಯ ಧನ ನೀಡಲಾಗುವುದು.

ಎಲ್ಲಾ ವಿಧಾನಸಬಾ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ಧಿಗೆ ₹8 ಸಾವಿರ ಕೋಟಿ ಮೀಸಲು.

4,09,549 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ

  • 2025-26 ಸಾಲಿನಲ್ಲಿ ಪಂಚ ಗ್ಯಾರಂಟಿಗೆ 51,034 ಕೋಟಿ ರೂ‌. ಅನುದಾನ

  • ಬಂಡವಾಳ ವೆಚ್ಚ 26,474 ಕೋಟಿ ರೂ.

  • ರಾಜಸ್ವ ವೆಚ್ಚ ಅಂದಾಜು 3,11,739 ಕೋಟಿ ರೂ.

  • 19,262 ಕೋಟಿ ರೂ. ರಾಜಸ್ವ ಕೊರತೆಯ ಬಜೆಟ್ ಮಂಡನೆ

  • 1,16,000 ಕೋಟಿ ರೂ. ಸಾಲದ ಮೊರೆ

  • ಒಟ್ಟು ರಾಜಸ್ವ ಸ್ವೀಕೃತಿ ಅಂದಾಜು 2,92,477 ಕೋಟಿ ರೂ.

  • ಈ ಪೈಕಿ 2,08,100 ಕೋಟಿ ಸ್ವಂತ ತೆರಿಗೆ ಸಂಗ್ರಹದ ಗುರಿ

SC/ST ಸಮುದಾಯಕ್ಕೆ ಕಾಮಗಾರಿಗಳಲ್ಲಿ ಮೀಸಲಾತಿ

ಎಸ್​ಸಿ, ಎಸ್​ಟಿ ಸಮುದಾಯಕ್ಕೆ 2 ಕೋಟಿ ರೂಪಾಯಿಯವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುವುದು. ಎಸ್​ಸಿಪಿ ಟಿಎಸ್​ಪಿ ಯೋಜನೆಗೆ 42018 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ಯಾವ ಇಲಾಖೆಗೆ ಎಷ್ಟು ಅನುದಾನ

  • ಶಿಕ್ಷಣ ಇಲಾಖೆ 45, 286 ಕೋಟಿ

  • ಇಂಧನ 26, 896 ಕೋಟಿ

  • ನೀರಾವರಿ 22,181 ಕೋಟಿ

  • ಆರೋಗ್ಯ17, 473 ಕೋಟಿ

  • ಕಂದಾಯ 17, 201 ಕೋಟಿ

  • ಸಮಾಜ ಕಲ್ಯಾಣ 16, 955 ಕೋಟಿ

ಮಲ್ಟಿಫ್ಲೆಕ್ಸ್​ಗಳಲ್ಲಿ ಸಿನಿಮಾ ಟಿಕೆಟ್​ಗೆ 200 ರೂಪಾಯಿ ನಿಗದಿ

ಸಿನಿಮಾ ಕ್ಷೇತ್ರವನ್ನ ಸಿನಿಮಾ ಉದ್ಯಮ ಎಂದು ಪರಿಗಣಿಸಿ ಕೈಗಾರಿಕಾ ನೀತಿಯಡಿ ತರಲು ನಿರ್ಧಾರ ಮಾಡಲಾಗಿದೆ. ಕನ್ನಡ ಸಿನಿಮಾಗಳಿಗೆ OTT ವೇದಿಕೆ ಸೃಷ್ಟಿಸಲು ನಿರ್ಧರಿಸಲಾಗಿದೆ. ಎಲ್ಲ ಚಿತ್ರಮಂದಿರಗಳಲ್ಲೂ ಸಿನಿಮಾ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಲಾಗುವುದು. ಈ ಮೂಲಕ ಸರ್ಕಾರ ಮಲ್ಟಿಫ್ಲೆಕ್ಸ್​ಗಳಲ್ಲಿ ಏಕರೂಪದ ದರನಿಗದಿಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಕ್ಫ್ ಆಸ್ತಿಗಳ ದುರಸ್ತಿ- ನವೀಕರಣಕ್ಕೆ 150 ಕೋಟಿ ರೂ. ಮೀಸಲು

ವಕ್ಫ್ ಆಸ್ತಿಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಮತ್ತು ಮುಸ್ಲಿಂ ಸ್ಮಶಾನಗಳ ರಕ್ಷಣೆ, ಮೂಲಸೌಕರ್ಯಕ್ಕಾಗಿ 150 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1,000 ರೂ., ಸಹಾಯಕಿಯರಿಗೆ 750 ರೂ. ಗೌರವಧನ ಹೆಚ್ಚಳ ಗೃಹ ಲಕ್ಷ್ಮಿ ಯೋಜನೆಗೆ 2025-26 ಸಾಲಿನಲ್ಲಿ 28,608 ಕೋಟಿ ರೂ. ಅನುದಾನ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಒಟ್ಟು 94,084 ಕೋಟಿ ರೂ. ಅನುದಾನ ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗೆ 62,033 ಕೋಟಿ ರೂ. ಅನುದಾನ ಘೋಷಣೆ.

ಅಬಕಾರಿ ಇಲಾಖೆಗೆ ಗುರಿ ನೀಡಿದ ಸರ್ಕಾರ ರಾಜ್ಯ ಸರ್ಕಾರ

ಅಬಕಾರಿ ಇಲಾಖೆಗೆ 36,500 ಕೋಟಿ ರೂ. ಆದಾಯದ ಗುರಿ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಮದ್ಯದ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ. ರಾಜ್ಯ ಸರ್ಕಾರ ಅಬಕಾರಿ ಸ್ಲ್ಯಾಬ್ ಪರಿಷ್ಕರಣೆಗೆ ನಿರ್ಧರಿಸಿದೆ.

ತೆರಿಗೆ ಸಂಗ್ರಹ ಗುರಿ

ವಾಣಿಜ್ಯ ತೆರಿಗೆ:

  • 2025-26ರಲ್ಲಿ 1,20,000 ಕೋಟಿ ರೂ. ಸಂಗ್ರಹ ಗುರಿ

  • 2024-25ರಲ್ಲಿ 1,05,000 ಸಂಗ್ರಹಿಸುವ ನಿರೀಕ್ಷೆ

ಅಬಕಾರಿ:

  • 2025-26 ಸಾಲಿನಲ್ಲಿ 40,000 ಕೋಟಿ ಸಂಗ್ರಹದ ಗುರಿ

  • 2024-25 ಸಾಲಿನ ಮಾರ್ಚ್ ಅಂತ್ಯಕ್ಕೆ 36,500 ಸಂಗ್ರಹದ ನಿರೀಕ್ಷೆ

ನೋಂದಣಿ ಮತ್ತು ಮುದ್ರಾಂಕ ಶುಲ್ಕ

  • 2025-26 ಸಾಲಿನಲ್ಲಿ 28,000 ಕೋಟಿ ರೂ. ಸಂಗ್ರಹದ ಗುರಿ

  • 2024-25ರಲ್ಲಿ 24,000 ಕೋಟಿ ರೂ‌‌. ಸಂಗ್ರಹದ ನಿರೀಕ್ಷೆ

ಮೋಟಾರು ವಾಹನ ತೆರಿಗೆ

  • 2025-26 ಸಾಲಿನಲ್ಲಿ 15,000 ಕೋಟಿ ರೂ. ಸಂಗ್ರಹದ ಗುರಿ

  • 2024-25 ಸಾಲಿನಲ್ಲಿ 12,500 ಕೋಟಿ ರೂ. ಸಂಗ್ರಹದ ನಿರೀಕ್ಷೆ

ಗಣಿ ಮತ್ತು ಭೂ ವಿಜ್ಞಾನ:

2025-26ರಲ್ಲಿ 3,000 ಕೋಟಿ ರೂ. ಖನಿಜ ತೆರಿಗೆ ಸಂಗ್ರಹದ ಗುರಿ. ಒಟ್ಟು 9,000 ಕೋಟಿ ರೂ‌. ತೆರಿಗೆಯೇತರ ರಾಜಸ್ವ ಸಂಗ್ರಹದ ಗುರಿ.

ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ನಕ್ಸಲ್ ಪ್ಯಾಕೇಜ್

ನಕ್ಸಲ್ ಪೀಡಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದ್ದು, 10 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ.

ತೊಗರಿ ಬೆಳೆಗಾರರಿಗೆ ​450 ರೂ. ಪ್ರೋತ್ಸಾಹಧನ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಸರ್ಕಾರ ನಿರ್ಧರಿಸಿದ್ದು, ಕ್ವಿಂಟಾಲ್​​ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದಿಂದ 450 ರೂ. ಪ್ರೋತ್ಸಾಹಧನ ನೀಡುವುದಾಗಿ ಸರ್ಕಾರ ತಿಳಿಸಿದೆ. ಸರ್ಕಾರ ಈ ನಿರ್ಧಾರದಿಂದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ.

ಜೈನ, ಬೌದ್ಧ, ಸಿಖ್ಖ್ ಸಮುದಾಯಗಳ ಅಭಿವೃದ್ಧಿಗೆ 100 ಕೋಟಿ ರೂ.

  • ಜೈನ, ಬೌದ್ಧ ಹಾಗೂ ಸಿಖ್ಖ್ ಸಮುದಾಯಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಮೀಸಲು

  • ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 250 ಕೋಟಿ ರೂ. ಮೀಸಲು

  • ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗುವುದು.

ಕಾರ್ಮಿಕ ಇಲಾಖೆ

ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹಿಸಲು ಕಟ್ಟಡ ರಾಜ್ಯದ 31 ಜಿಲ್ಲೆಗಳಲ್ಲಿ 6 ರಿಂದ 12ನೇ ತರಗತಿಯವರೆಗೂ ವಸತಿ ಶಾಲೆಗಳ ಪ್ರಾರಂಭಕ್ಕೆ 750 ಕೋಟಿ ರೂ.ಗಳ ನಿಗದಿ.

ನೋಂದಾಯಿತ ಕಾರ್ಮಿಕರಿಗೆ ಶೈಕ್ಷಣಿಕ, ವೈದ್ಯಕೀಯ ಸೌಲಭ್ಯಕ್ಕಾಗಿ ನೀಡುತ್ತಿರುವ ಸಹಾಯಧನ ದ್ವಿಗುಣ

ಸಹಜ ಮರಣ ಹೊಂದಿದಲ್ಲಿ 1.5 ಲಕ್ಷ ಪರಿಹಾರ. ಕೆಲಸದ ಸ್ಥಳದಲ್ಲಿ ಮರಣಹೊಂದಿದರೆ 8 ಲಕ್ಷ ರೂ.ಗಳ ಪರಿಹಾರ ಘೋಷಣೆ.

ಆಯುಷ್ಮಾನ್​ ಭಾರತ್​ ಆರೋಗ್ಯ ಯೋಜನೆಯಡಿ 5 ಲಕ್ಷ ಮಿತಿ ಪೂರ್ಣಗೊಂಡಲ್ಲಿ ಹೃದ್ರೋಗ, ಕ್ಯಾನ್ಸ್​ರಗೆ 5 ಲಕ್ಷ ರೂ. ಇತರೆ ಕಾಯಿಲೆಗಳಿಗೆ 2 ಲಕ್ಷ ರೂ.ಗಳನ್ನು ಪಾವತಿ.

ರಾಜ್ಯ ವಿಮಾ ಆಸ್ಪತ್ರೆ(ಇಎಸ್​ಐ) ಮೂಲಸೌಲಭ್ಯ ಹೆಚ್ಚಳ ಮಾಡಲು 51 ಕೋಟಿ ರೂ.ಗಳ ನಿಗದಿ

ಹೊಸ ಯೋಜನೆಗಳು?

500 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ

1,080 ಕೋಟಿ ವೆಚ್ಚದಲ್ಲಿ ವೃಷಭಾವತಿ ವ್ಯಾಲಿ ಯೋಜನೆ

ಎತ್ತಿನಹೊಳೆ ಯೋಜನೆಗೆ 553 ಕೋಟಿ ರೂಪಾಯಿ ಮೀಸಲು

ಪಶುಸಂಗೋಪನೆ

  • ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ಜಾರಿ.

  • 2025-26 ನೇ ಸಾಲಿನಲ್ಲಿ 50 ನೂತನ ಪಶು ಚಿಕಿತ್ಸಾಲಯ ಪ್ರಾರಂಭ.

  • 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡ ನಬಾರ್ಡ್ ಸಹಯೋಗದಲ್ಲಿ ನಿರ್ಮಾಣ.

  • ಅರಣ್ಯ ಇಲಾಖೆ ಹಾಗೂ ನರೇಗಾ ಸಹಯೋಗದೊಂದಿಗೆ ಮೇವಿನ ಮರಗಳ ನೆಡುತೋಪು ಅಭಿವೃದ್ಧಿ.

ರೇಷ್ಮೆ ಕೃಷಿ

  • ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆ.

  • ರಾಮನಗರ ಮತ್ತು ಶಿಡ್ಲಘಟ್ಟ ಹೈಟೆಕ್ ರೇಷ್ಮೆ ಗೂಡಿನ ಮೊದಲ ಹಂತದ ಕಾಮಗಾರಿ ಪೂರ್ಣ.

  • ಪ್ರಸ್ತಕ ಸಾಲಿನಲ್ಲಿ ಎರಡನೇ ಹಂತದ ಕಾಮಗಾರಿಗೆ 250 ಕೋಟಿ ರೂ. ವೆಚ್ಚ.

  • ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ನಬಾರ್ಡ್ ಸಹಯೋಗದಲ್ಲಿ ಸ್ಥಾಪನೆ.

  • ರೇಷ್ಮೆ ಬೆಳೆ ವಿಸ್ತರಿಸಲು 55 ಕೋಟಿ ರೂ. ಅನುದಾನ.

ನೀರಾವರಿ ಯೋಜನೆಗೆ ಸರ್ಕಾರ ಒತ್ತು

  • ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟಿನ ಗೇಟ್ ಅನ್ನು 524.256 ಮೀಟರ್ ವರೆಗೆ ಎತ್ತರಿಸುವುದು, ರೈತರಿಗೆ ಪರಿಹಾರ ವಿತರಣೆಗೆ ಕ್ರಮ.

  • ಕಳಸಾ - ಬಂಡೂರಾ ನಾಲಾ ತಿರುವು ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಆರಂಭ.

  • ಒಂದು ಲಕ್ಷದ ಎಪ್ಪತ್ತೇಳು ಸಾವಿರ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ.

  • ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಲಮಿತಿಯೊಳಗೆ ಪೂರ್ಣ.

  • 2.01 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಬಾಕಿ ಕಾಮಗಾರಿ ಅನುಷ್ಟಾನಗೊಳಿಸಲು ಕ್ರಮ.

  • ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಪೂರ್ವ ಸಿದ್ಧತಾ ಕಾರ್ಯ ಅಂತಿಮ.

  • ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳ ತೀರುವಳಿ ದೊರೆತ ಕೂಡಲೇ ಯೋಜನೆ ಅನುಷ್ಠಾನ.

  • ಜಲಸಂಪನ್ಮೂಲ ಇಲಾಖೆಯಲ್ಲಿ ಕಾಮಗಾರಿಗಳ ಅಂದಾಜು ತಯಾರಿಕೆಯಲ್ಲಿ ಏಕರೂಪದ ತಾಂತ್ರಿಕ ಮಾನದಂಡ ಜಾರಿ.

  • ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಹಾಗೂ ಇತರ ನದಿಗಳ ಕಣಿವೆಯ ವಿವಿಧ ಯೋಜನೆಗಳಡಿ ಬಾಕಿ ಕಾಮಗಾರಿಗಳ ಪೂರ್ಣಗೊಳಿಸಲು ಕ್ರಮ.

  • ರಾಜ್ಯಾದ್ಯಂತ ಸಣ್ಣ ನೀರಾವರಿ ಯೋಜನೆಗಳಿಗೆ 2 ಸಾವಿರ ಕೋಟಿ ರೂ.

  • ಸಣ್ಣ ನೀರಾವರಿ: ಎತ್ತಿನಹೊಳೆ ಯೋಜನೆಯಿಂದ ಮಧುಗಿರಿ ತಾಲೂಕಿನ 45 ಕೆರೆಗಳು, ಕೊರಟಗೆರೆ ತಾಲೂಕಿನ 62 ಕೆರೆಗಳಿಗೆ ನೀರು ತುಂಬಿಸಲು 553 ಕೋಟಿ ರೂ. ಅನುಷ್ಠಾನಗೊಳಿಸಲು ಕ್ರಮ.

  • 1,080 ಕೋಟಿ ರೂ. ಮೊತ್ತದ ವೃಷಭಾವತಿ ವ್ಯಾಲಿ ಮೊದಲನೇ ಹಂತದ 70 ಕೆರೆ ತುಂಬಿಸುವ ಯೋಜನೆ.

ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ

ಪ್ರವರ್ಗ 1, 2ಎ, 2ಬಿ (ಮುಸ್ಲಿಂ) ಸಮುದಾಯದವರಿಗೆ 2 ಕೋಟಿ ರೂ.ವರೆಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ನಿರ್ಧಾರ.

ಕೈಗಾರಿಕ ಪ್ರದೇಶ ಭೂಮಿ ಹಂಚಿಕೆಯಲ್ಲೂ ಪ್ರವರ್ಗ ೧ ೨ಎ ಜತೆ ೨ಬಿ (ಮುಸ್ಲಿಂ) ಗೆ ಶೇಕಡಾ ೨೦ ರಷ್ಟು ಮೀಸಲಾತಿ ಘೋಷಣೆ

ಅಂತರ್ಜಲ ಹೆಚ್ಚಿಸಲು ಯೋಜನೆ

ಎತ್ತಿನ ಹೊಳೆ ಯೋಜನೆಯಿಂದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ 45 ಕೆರೆಗಳನ್ನು ಹಾಗೂ ಕೊರಟಗೆರೆ ತಾಲೂಕಿನ 62 ಕೆರೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸುವ ಯೋಜನೆಯನ್ನು ರೂ.553 ಕೋಟಿ ಮೊತ್ತದಲ್ಲಿ ಅನುಷ್ಟಾನಗೊಳಿಸಲು ಕ್ರಮ.

ಧಾರ್ಮಿಕ ದತ್ತಿ ಇಲಾಖೆ ಅರ್ಚಕರಿಗೆ ತಸ್ತೀಕ್ ಮೊತ್ತದ ಏರಿಕೆ

  • ಧಾರ್ಮಿಕ ದತ್ತಿ ಇಲಾಖೆ ಅರ್ಚಕರಿಗೆ ತಸ್ತೀಕ್ ಮೊತ್ತದ ಏರಿಕೆ ಮಾಡಲು ನಿರ್ಧರಿಸಲಾಗಿದ್ದು, 60 ಸಾವಿರ ರೂ.ನಿಂದ 72 ಸಾವಿರಕ್ಕೆ ತಸ್ತೀಕ್ ಮೊತ್ತ ಏರಿಸಲಾಗುವುದು.

  • ಕರ್ನಾಟಕ ದೇವಾಲಯ ವಸತಿ ಕೋಶ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ.

  • ದೇವಾಲಯಗಳ ಛತ್ರಗಳಲ್ಲಿ ರೂಮ್​ ಬುಕಿಂಗ್​ಗೆ ವ್ಯವಸ್ಥೆ ಕಲ್ಪಿಸಲಾಗುವುದು.

  • ರಾಜ್ಯದಲ್ಲಿ ಒತ್ತುವರಿಯಾಗಿರುವ ದೇಗುಲಗಳ ಆಸ್ತಿ ರಕ್ಷಿಸಲು, ಭೂವರಾಹ ಯೋಜನೆಯಡಿ ಸ್ಥಿರಾಸ್ತಿ ದಾಖಲೀಕರಣಗೊಳಿಸಲು ಕ್ರಮವಹಿಸಲಾಗುವುದು.

  • ಪ್ರವಾಸೋದ್ಯೋಮ ತಾಣವಾಗಿ ಚಂದ್ರಗುತ್ತಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

ಸವದತ್ತಿಯ ರೇಣುಕಾ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿಗೆ ಕ್ರಮ

ವಿಶೇಷ ಬಂಡವಾಳ ಯೋಜನೆಯಡಿ ಒಟ್ಟಾರೆ 199 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳ ಸವದತ್ತಿಯ ರೇಣುಕಾ ಯಲ್ಲಮ್ಮ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿರುವ ದೇವಿಕಾರಾಣಿ ರೋರಿಚ್‌ ಎಸ್ಟೇಟ್‌ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

'ಕೃಷಿ ಮೊದಲು ಸರ್ವಕ್ಕೆ, ಕೃಷಿಯಿಂ ಪಸರಿಸುವುದು ಆ ಕೃಷಿಯನುದ್ಯೋಗಿಸುವ ಜನವನು ಪಾಲಿಸುವುದು'

ಕರ್ನಾಟಕದ ಜಿಎಸ್‌ಡಿಪಿ ಶೇ.7.4 ರಷ್ಟು ಬೆಳವಣಿಗೆ ಕಾಣಲಿದ್ದು, ರಾಷ್ಟ್ರೀಯ ಬೆಳವಣಿಗೆ ದರವನ್ನು ಮೀರಲಿದೆ

ಕರ್ನಾಟಕವು ಶೇ.7.4 ರಷ್ಟು ಜಿಎಸ್‌ಡಿಪಿ ಬೆಳವಣಿಗೆ ದರವನ್ನು ಸಾಧಿಸುವ ವಿಶ್ವಾಸದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.

"ಕರ್ನಾಟಕವು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ, ಇದು ರಾಷ್ಟ್ರೀಯ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ಶೇಕಡಾ 8.4 ರಷ್ಟು ಕೊಡುಗೆ ನೀಡುತ್ತದೆ. ಕರ್ನಾಟಕವು 2024-25ನೇ ಸಾಲಿನಲ್ಲಿ ತನ್ನ ಪ್ರಭಾವಶಾಲಿ ಬೆಳವಣಿಗೆಯ ಪಥವನ್ನು ಮುಂದುವರೆಸಿದೆ ಮತ್ತು ರಾಷ್ಟ್ರೀಯ ಬೆಳವಣಿಗೆ ದರವಾದ ಶೇಕಡಾ 6.4 ಕ್ಕಿಂತ ಹೆಚ್ಚಿನದನ್ನು ಗಳಿಸಿ ಶೇಕಡಾ 7.4 ರಷ್ಟು GSDP ಬೆಳವಣಿಗೆಯ ದರವನ್ನು ಸಾಧಿಸಲು ಸಜ್ಜಾಗಿದೆ."

2025-26ರ ಹಣಕಾಸು ವರ್ಷದ ಬಜೆಟ್ ಅನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸುವಾಗ ಅವರು ಈ ಹೇಳಿಕೆ ನೀಡಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ; ಮಲ್ಟಿಪ್ಲೆಕ್ಸ್, ಥಿಯೇಟರ್‌ಗಳಲ್ಲಿ 200 ರೂ ಟಿಕೆಟ್ ದರ ಫಿಕ್ಸ್

ಕನ್ನಡ ಚಲನಚಿತ್ರೋದ್ಯಮಕ್ಕೆ "ಉದ್ಯಮ" ಸ್ಥಾನಮಾನ ನೀಡಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ ನೀಡಲಾಗುವುದು ಮತ್ತು ಕೈಗಾರಿಕಾ ನೀತಿಯಡಿಯಲ್ಲಿ ಒದಗಿಸಲಾದ ಸೌಲಭ್ಯಗಳನ್ನು ಚಲನಚಿತ್ರೋದ್ಯಮಕ್ಕೂ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದಾರೆ.

ಕರ್ನಾಟಕದ ಸಿನಿಮಾ ಪ್ರೇಮಿಗಳ ಬಹುವರ್ಷದ ಬೇಡಿಕೆ ಆಗಿದ್ದ ಮಲ್ಟಿಪ್ಲೆಕ್ಸ್​ ಟಿಕೆಟ್ ದರ ನಿಯಂತ್ರಣ ಮಾಡುವ ಬೇಡಿಕೆಗೆ ಸರ್ಕಾರ ಅಸ್ತು ಎಂದಿದೆ. ಬಜೆಟ್​ನಲ್ಲಿ ಮಲ್ಟಿಪ್ಲೆಕ್ಸ್​ ಟಿಕೆಟ್ ದರಗಳನ್ನು 200 ರೂಪಾಯಿಗೆ ಸಿಎಂ ನಿಗದಿಪಡಿಸಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮುಕ್ತಾಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನು ಮುಕ್ತಾಯಗೊಳಿಸಿದ್ದಾರೆ. ಮುಖ್ಯಮಂತ್ರಿಗಳು ಸುದೀರ್ಘ 3 ಗಂಟೆ 30 ನಿಮಿಷ ಕಾಲ ಸುದೀರ್ಘ ಬಜೆಟ್ ಮಂಡನೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT