ಬೆಂಗಳೂರು: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು, ಮುಂದಿನ ಹಣಕಾಸು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಗುರುವಾರ ಹೇಳಿದರು.
ಸಂಸದ ಕುಶಾಲಪ್ಪ (ಸುಜಾ) ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಡವ ಹೆರಿಟೇಜ್ ಕೇಂದ್ರದ ಕೆಲಸವನ್ನು 2013-14 ರಲ್ಲಿ 268.04 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಪ್ರಾರಂಭಿಸಲಾಯಿತು. ನಂತರ ಈ ಕಾಮಗಾರಿಯನ್ನು 330 ಲಕ್ಷ ರೂ.ಗಳಲ್ಲಿ ಮುಗಿಸಲು ಆಡಳಿತಾತ್ಮಕ ಅನುಮೋದನೆಯನ್ನು ಮಡೆದುಕೊಂಡು 6 ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಇನ್ನೂ ಈ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯು ಸಿ.ಎಸ್.ಆರ್. ಅನುದಾನದಡಿಯಲ್ಲಿ ಕಾಮಗಾರಿಯನ್ನು ಮಾಡಲು ಕೊಡಗು ಜಿಲ್ಲಾಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಕೋರಲಾಗಿತ್ತು. ಆದರೆ, ಕೊಡಗಿನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯವರು ಕಾಮಗಾರಿಯನ್ನು ಸಿಎಸ್.ಆರ್. ಅನುದಾನದಲ್ಲಿ ಕೈಗೊಂಡು ನಿರ್ವಹಣೆ ಮಾಡಲು ಕಷ್ಟಸಾಧ್ಯ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸದರಿ ಕಾಮಗಾರಿಯನ್ನು ಪಿ.ಪಿ.ಪಿ ಮಾದರಿಯಲ್ಲಿ ಪೂರ್ಣಗೊಳಿಸಿ ನಿರ್ವಹಣೆ ಹಾಗೂ ಕಾರ್ಯಾಚರಣೆ ಮಾಡುವ ಬಗ್ಗೆ ಮಾರ್ಗದರ್ಶನ ಕೋರಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.