ಬೆಂಗಳೂರು: ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವ ಎನ್.ಎಸ್. ಬೋಸರಾಜು ಅವರು ಗುರುವಾರ ಹೇಳಿದರು.
ಪರಿಷತ್ತಿನಲ್ಲಿ ಎಂಎಲ್‌ಸಿ ಡಿಟಿ ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯಲ್ಲಿ ಒಟ್ಟು 270 ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿವೆ, 2024-25ನೇ ಸಾಲಿನಲ್ಲಿ 29,867 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಒಟ್ಟಾರೆ 23,939 ಮಂಜೂರಾತಿ ಸಂಖ್ಯೆ ಪೈಕಿ 5,929 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರವೇಶ ಕಲ್ಪಿಸಲಾಗಿದೆ ಎಂದು ಹೇಳಿದರು.
2024-2025ನೇ ಸಾಲಿನ ಬಜೆಟ್ ಘೋಷಣೆಯಂತೆ, ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಆಹಾರ ವೆಚ್ಚದ ದರವನ್ನು 100 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಭೋಜನಾ ವೆಚ್ಚ ಮೊದಲು ಮಾಸಿಕ ಒಂದು ವಿದ್ಯಾರ್ಥಿಗೆ 1,750 ರೂ. ಕೊಡಲಾಗುತ್ತಿತ್ತು. ಈಗ ಅದನ್ನ 100 ರೂ.ಗೆ ಹೆಚ್ಚಳ ಮಾಡಲಾಗಿದ್ದು, 1,850 ರೂಪಾಯಿ ಕೊಡಲಾಗುತ್ತಿದೆ. ಹೆಚ್ಚುವರಿಯಾಗಿ ಭೋಜನ ವೆಚ್ಚ ಕೊಡುವ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆಂದು ತಿಳಿಸಿದರು.