ಕೊಪ್ಪಳ: ಕೊಪ್ಪಳದ ಗಂಗಾವತಿಯಲ್ಲಿ ನಡೆದ ವಿದೇಶಿ ಮಹಿಳೆ ಮತ್ತು ಸ್ಥಳೀಯ ಹೋಮ್ ಸ್ಟೇ ಮಾಲಕಿಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತುಂಗಭದ್ರ ಎಡದಂಡೆ ಕಾಲುವೆ ಬಳಿ ತಡರಾತ್ರಿಯವರೆಗೆ ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಇಸ್ರೇಲಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಲ್ಲದೆ ಈ ವೇಳೆ ಸ್ಥಳದಲ್ಲಿದ್ದ ಇತರೆ ಮೂರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದರು. ಈ ಪೈಕಿ ನಾಪತ್ತೆಯಾಗಿದ್ದ ಪ್ರವಾಸಿಯ ಶವ ಇಂದು ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಪತ್ತೆಯಾಗಿದೆ. ಮೃತನನ್ನು ಒರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿದೆ.
ಈ ಮಧ್ಯೆ, ಇಬ್ಬರು ಮಹಿಳಾ ಸಂತ್ರಸ್ತರ ಮೇಲೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಸಂತ್ರಸ್ಥ ಮಹಿಳೆಯರ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಹಲ್ಲೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಪೊಲೀಸರು ಗಂಗಾವತಿ ನಿವಾಸಿಗಳಾದ ಮಲ್ಲೇಶ್ ಅಲಿಯಾಸ್ ಹಂಡಿಮಲ್ಲ (22) ಮತ್ತು ಚೇತನ್ ಸಾಯಿ (21) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಮೂರನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಅಂತೆಯೇ ವೈದ್ಯಕೀಯ ವರದಿಗಳು ಬಂದ ನಂತರ ಅತ್ಯಾಚಾರದ ಆರೋಪವನ್ನು ದೃಢೀಕರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ತಂಡ ರಚನೆ
ಇನ್ನು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಆರು ತಂಡಗಳನ್ನು ರಚಿಸಿದ್ದರು. ಇದೀಗ ಇಬ್ಬರ ಬಂಧನವಾಗಿದ್ದು ನಾಪತ್ತೆಯಾಗಿರುವ ಮೂರನೇ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.
ಪೆಟ್ರೋಲ್ ಗೆ 100 ರೂ ಕೊಡಲಿಲ್ಲ, ಮಹಿಳೆಯರ ಸಾಮೂಹಿಕ ಅತ್ಯಾಚಾರ
ಇನ್ನು ದುಷ್ಕರ್ಮಿಗಳು ಮದ್ಯ ಸೇವಿಸಿದ ನಂತರ ತಮ್ಮ ದ್ವಿಚಕ್ರ ವಾಹನದಲ್ಲಿ ಸುತ್ತುವ ಅಭ್ಯಾಸವನ್ನು ಹೊಂದಿದ್ದರು. ಇದೇ ರೀತಿ ಗುರುವಾರ ಅವರು ಸವಾರಿಯಲ್ಲಿದ್ದಾಗ ಪ್ರವಾಸಿಗರ ಗುಂಪನ್ನು ಭೇಟಿಯಾಗಿದ್ದಾರೆ. ಈ ವೇಳೆ ಮೊದಲು ಅವರು ಪೆಟ್ರೋಲ್ ಬಂಕ್ ಕುರಿತು ವಿಚಾರಿಸಿದ್ದು, ಈ ವೇಳೆ ಪೆಟ್ರೋಲ್ ಗೆ ಹಣ ನೀಡು ಎಂದು ಕೇಳಿದ್ದಾರೆ. ಪ್ರವಾಸಿಗರು ಹಣ ನೀಡಲಿಲ್ಲ ಎಂದು ಜಗಳ ತೆಗೆದಿದ್ದಾರೆ. ಬಳಿಕ ಅಲ್ಲಿದ್ದ ಪುರುಷರನ್ನು ಹೊಡೆದು ಅವರನ್ನು ನಾಲೆಗೆ ತಳ್ಳಿದ್ದಾರೆ. ನಂತರ ಇಸ್ರೇಲಿ ಮೂಲದ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿಯ ಮೇಲೆ ಹಲ್ಲೆ ಮಾಡಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ.
ನಾಲೆಗೆ ಬಿದ್ದ ಮೂರು ಪುರುಷರ ಪೈಕಿ ಇಬ್ಬರು ಈಜಿ ಜೀವ ಉಳಿಸಿಕೊಂಡಿದ್ದು, ಓರ್ವ ಒಡಿಶಾದ ಮತ್ತೊಬ್ಬ ಪ್ರವಾಸಿಗರು ಈಜಲು ಬಾರದೇ ಸಾವನ್ನಪ್ಪಿದ್ದಾರೆ. ಈತನ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಮೂರನೇ ಆರೋಪಿಯನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.