ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಿಸಿದ ಒಂದು ತಿಂಗಳ ನಂತರವೂ ಜನರ ಆಕ್ರೋಶ, ಪ್ರತಿಭಟನೆ ನಿಂತಿಲ್ಲ. ದರವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿ ಭಾನುವಾರ ಮೆಟ್ರೋ ರೈಲಿನ ಒಳಗಡೆ ಗ್ರೀನ್ ಪೀಸ್ ಇಂಡಿಯಾ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಹತ್ತಿದ ಕಾರ್ಯಕರ್ತರು, ರೈಲಿನ ಒಳಗಡೆ ಬೆಲೆ ಏರಿಕೆಯಿಂದ ಅಸಮಾನತೆ ಏರಿಕೆ ಎಂಬ ಫಲ ಪ್ರದರ್ಶಿಸಿ ಮೌನ ಪ್ರತಿಭಟಿಸಿದರು. ಬಳಿಕ ಎಂ. ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಹೊರಬಂದ ಬಳಿಕ ' ಮೆಟ್ರೋ ಪರಿಷ್ಕೃತ ದರವನ್ನು ಹಿಂಪಡೆಯಿರಿ ಎಂಬ ಆಗ್ರಹದ ಫಲಕ ಪ್ರದರ್ಶಿಸಿದರು.
ದರ ಏರಿಕೆಯಾದ ನಂತರ ಗ್ರೀನ್ ಪೀಸ್ ಇಂಡಿಯಾ ಸಮೀಕ್ಷೆ ನಡೆಸಿತ್ತು. ದರ ಏರಿಕೆಯೂ ಒಂದು ಹೊತ್ತಿನ ಊಟಕ್ಕೆ ವ್ಯಯಿಸುವ ಖರ್ಚಿಗೆ ಸಮಾನವಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ. 72.9 ರಷ್ಟು ಜನರು ಅಭಿಪ್ರಾಯ ತಿಳಿಸಿದ್ದರು.
ಮೆಟ್ರೋ ದರ ಏರಿಕೆಯಿಂದ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಇಳಿಮುಖವಾಗಿದ್ದು, ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿರುವುದರಿಂದ ನಗರದಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಹಾಗೂ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ ಎಂದು ಗ್ರೀನ್ ಪೀಸ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.