ಬೆಂಗಳೂರು: ತ್ಯಾಜ್ಯ ಸುರಿದು ವೆಂಗಯ್ಯ ಕೆರೆಯನ್ನು ಮಲಿನಗೊಳಿಸುತ್ತಿದ್ದವರಿಗೆ ಕೆಆರ್.ಪುರಂನ ನಿವಾಸಿಗಳು ಸ್ವಚ್ಚತಾ ಕಾರ್ಯ ಮಾಡಿಸಿ, ತಕ್ಕ ಪಾಠ ಕಲಿಸಿದ್ದಾರೆ.
ಕೆರೆ ಬಳಿ ಕೆಎ-ಒ7, ಟಿಎ 4285 ನೋಂದಣಿ ಸಂಖ್ಯೆಯ ಟ್ರ್ಯಾಕ್ಟರ್ ಅನ್ನು ನಿಂತಿರುವುದನ್ನು ಕಾರ್ಯಕರ್ತ ಬಾಲಾಜಿ ಆರ್ ಅವರು ಗಮನಿಸಿದ್ದಾರೆ. ಟ್ರ್ಯಾಕ್ಟರ್‌ನ ಬದಿಯಲ್ಲಿ "ಬಿಬಿಎಂಪಿ" ಎಂದು ಬಣ್ಣ ಬಳಿಯಲಾಗಿತ್ತು. ಈ ವೇಳೆ ಚಾಲಕನ ಬಳಿ ಹೋಗಿ ತ್ಯಾಜ್ಯ ಸುರಿಯಲು ಇರುವ ಅನುಮತಿ ಪತ್ರ ತೋರಿಸುವಂತೆ ಕೇಳಲಾಯಿತು. ಆದರೆ ಅವರ ಬಳಿ ಅನುಮತಿ ಪತ್ರ ಇರಲಿಲ್ಲ ಎಂದು ಹೇಳಿದ್ದಾರೆ.
ಬಳಿಕ ಟ್ರ್ಯಾಕ್ಟರ್‌ನ ಕೀಲಿಯನ್ನು ಕಸಿದುಕೊಂಡು ಟ್ರ್ಯಾಕ್ಟರ್‌ನಲ್ಲಿದ್ದವರನ್ನು ಕೆಳಗಿಳಿಸಿ, ಸ್ವಚ್ಛತೆ ಮಾಡುವಂತೆ ಒತ್ತಾಯಿಸಲಾಯಿತು.
ಕೆರೆ ಬಫರ್ ವಲಯಗಳಲ್ಲಿ ಮತ್ತು ರಸ್ತೆಗಳಲ್ಲಿ ಇಂತಹ ಅಕ್ರಮ ತ್ಯಾಜ್ಯ ವಿಲೇವಾರಿ ವ್ಯಾಪಕವಾಗಿದೆ. ಅಧಿಕಾರಿಗಳು ಇಂತಹ ವಾಹನಗಳನ್ನು ವಶಪಡಿಸಿಕೊಂಡು ಭಾರೀ ದಂಡ ವಿಧಿಸಬೇಕು ಎಂದು ಬಾಲಾಜಿ ಅವರು ಆಗ್ರಹಿಸಿದ್ದಾರೆ.
ಕೆರೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ತ್ಯಾಜ್ಯ ಸುರಿಯುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗುವುದು ಎಂದು ಬಿಬಿಎಂಪಿ ಕೆರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೋಲ್ ಸಂಗ್ರಹ ನಿರ್ವಹಿಸುತ್ತಿರುವ ಹೊಸಕೋಟೆ ಲ್ಯಾಂಕೊ ಹೆದ್ದಾರಿ ಲಿಮಿಟೆಡ್‌ನ ಉಸ್ತುವಾರಿ ವಹಿಸಿರುವ ಮುದಾಸೀರ್ ಅವರು ಮಾತನಾಡಿ, ಈ ಹಿಂದೆ ಕೂಡ ಇದೇ ರೀತಿ ಕೆರೆ ಬಳಿ ತ್ಯಾಜ್ಯವನ್ನು ಸುರಿಸಿದ್ದಾರೆ. ರಾತ್ರಿ ವೇಳೆ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆಂದು ಹೇಳಿದ್ದಾರೆ.
ನಾವು ಹಲವಾರು ಬಾರಿ ಈ ತ್ಯಾಜ್ಯವನ್ನು ತೆರವುಗೊಳಿಸಿದ್ದೇವೆ. ಈ ತ್ಯಾಜ್ಯವು ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯನ್ನು ಎದುರು ಮಾಡುತ್ತದೆ. ಸವಾರರು ಜಾರಿ ಬೀಳುವ ಸಾಧ್ಯತೆಗಳಿರುತ್ತವೆ. ಪಾಲಿಕೆ ಅಧಿಕಾರಿಗಳು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬಿಎಸ್‌ಡಬ್ಲ್ಯೂಎಂಎಲ್ ಹಿರಿಯ ಅಧಿಕಾರಿಗಳು ಮಾತನಾಡಿ, ಘಟನೆಯ ವಿಡಿಯೋ ಲಭಿಸಿದ್ದು, ಪರಿಶೀಲಿಸಲು ಸ್ಥಳೀಯ ಅಧಿಕಾರಿಗಳಿಗೆ ರವಾನಿಸಲಾಗಿದೆ. ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಎಫ್‌ಐಆರ್ ದಾಖಲಿಸುವಂತೆ ಹಾಗೂ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.