ಮಂಗಳೂರು: ಕಳೆದ ಫೆಬ್ರವರಿ 25 ರಂದು ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ (17ವ) ಕೊನೆಗೂ ನಿನ್ನೆ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಸಿಗಬಹುದು ಎಂಬ ಭೀತಿಯಿಂದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆಯುವುದನ್ನು ತಪ್ಪಿಸಲು ದಿಗಂತ್ ಮನೆಬಿಟ್ಟು ಹೋಗಿದ್ದನು ಎಂದು ತನಿಖೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹತ್ತಿರದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಸ್ವಲ್ಪ ಹಣ ತೆಗೆದುಕೊಂಡು ಮನೆಯಿಂದ ಹೊರಟುಹೋಗಿದ್ದನು. ಮೊದಲು ಬಂಟ್ವಾಳದಿಂದ ರೈಲಿನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಬೆಂಗಳೂರಿಗೆ ಹೋಗಿದ್ದನು.
ಬೆಂಗಳೂರು ಸಮೀಪ ನಂದಿ ಬೆಟ್ಟದ ಬಳಿಯ ರೆಸಾರ್ಟ್‌ನಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿ ಸುಮಾರು 3,000 ರೂಪಾಯಿ ಸಂಪಾದಿಸಿ ಅಲ್ಲಿಂದ ಶಿವಮೊಗ್ಗಕ್ಕೆ ಹೋಗಿ ರೈಲಿನಲ್ಲಿ ಮೈಸೂರಿಗೆ ಹಿಂತಿರುಗಿದ್ದನು. ಮೈಸೂರಿನಿಂದ, ಮೊನ್ನೆ ಶನಿವಾರ ಮಂಗಳೂರು ಮೂಲಕ ಮುರುಡೇಶ್ವರಕ್ಕೆ ರೈಲು ಹತ್ತಿದನು.
ಉಡುಪಿಯಲ್ಲಿ ರೈಲು ಇಳಿದು ಡಿ ಮಾರ್ಟ್ ಸೂಪರ್ ಮಾರ್ಕೆಟ್‌ಗೆ ಹೋದನು, ಅಲ್ಲಿನ ಸಿಬ್ಬಂದಿ ತಪಾಸಣೆ ನಡೆಸಿದಾಗ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದಾಗ ಗುರುತಿಸಿದರು. ಸೂಪರ್ ಮಾರ್ಕೆಟ್ ಸಿಬ್ಬಂದಿಯ ಫೋನ್‌ನಿಂದ ಅವನು ತನ್ನ ತಾಯಿಯೊಂದಿಗೆ ಮಾತನಾಡಿ, ತಾನು ಸುರಕ್ಷಿತವಾಗಿದ್ದೇನೆ, ತನ್ನನ್ನು ಅಪಹರಿಸಲಾಗಿತ್ತು ಎಂದು ಹೇಳಿಕೊಂಡಿದ್ದಾನೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ದಿಗಂತ್ ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದು, ನಾಡಿದ್ದು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.