ಮಂಗಳೂರು: ಫೆಬ್ರವರಿ 25 ರಿಂದ ನಾಪತ್ತೆಯಾಗಿದ್ದ ಮಂಗಳೂರಿನ ವಿದ್ಯಾರ್ಥಿ ಮಾರ್ಚ್ 7 ರಂದು ಉಡುಪಿಯಲ್ಲಿ ಪತ್ತೆಯಾಗಿದ್ದು, ಮರುದಿನ ದಕ್ಷಿಣ ಕನ್ನಡ ಪೊಲೀಸರಿಗೆ ಒಪ್ಪಿಸಲಾಗಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಆರಂಭದಲ್ಲಿ ನನ್ನನ್ನು ಅಪಹರಣ ಮಾಡಲಾಗಿತ್ತು ಎಂದು ಪಿಯು ವಿದ್ಯಾರ್ಥಿ ದಿಗಂತ್ ಹೇಳಿಕೆ ನೀಡಿದ್ದ. ಆದರೆ, ತದನಂತರ ಮಾರ್ಚ್ 3 ರಂದು ಪ್ರಾರಂಭವಾದ ಪರೀಕ್ಷೆಗೆ ಸಿದ್ಧವಾಗಿಲ್ಲದ ಕಾರಣ ಮನೆಬಿಟ್ಟು ಹೋಗಿರುವುದನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದರು.
ದಿಗಂತ್ ರೂ.500 ಇಟ್ಟುಕೊಂಡು ಮನೆ ಬಿಟ್ಟಿದ್ದು, ಮಂಗಳೂರಿಗೆ ತೆರಳುವ ಮುನ್ನಾ ಅರ್ಕುಳಕ್ಕೆ ರೈಲ್ವೆ ಹಳಿಗಳ ಮೇಲೆ ನಡೆದು ಹೋಗಿದ್ದಾನೆ. ನಂತರ ಬಸ್ಸಿನಲ್ಲಿ ಶಿವಮೊಗ್ಗ, ಮೈಸೂರಿಗೆ ತೆರಳಿದ್ದ. ಅಲ್ಲಿಂದ ಬೆಂಗಳೂರು ರೈಲು ಹತ್ತಿ ಕೆಂಗೇರಿಯಲ್ಲಿ ಇಳಿದಿದ್ದು, ಬಳಿಕ ನಂದಿ ಹಿಲ್ಸ್‌ಗೆ ಹೋಗಿ ಅಲ್ಲಿ ಎರಡು ದಿನ ರೆಸಾರ್ಟ್‌ನಲ್ಲಿ ಕೆಲಸ ಮಾಡಿದ್ದ. ಅಲ್ಲಿ ಸ್ವಲ್ಪ ಹಣ ಸಂಪಾದಿಸಿ ಮೈಸೂರಿಗೆ ಹಿಂತಿರುಗಿದ್ದು, ರೈಲಿನಲ್ಲಿ ಉಡುಪಿಗೆ ಬಂದಿಳಿದಿದ್ದ ಎಂದು ಮಾಹಿತಿ ನೀಡಿದರು.
ಉಡುಪಿಯಲ್ಲಿ ದಿಗಂತ್ ಆಹಾರ ಮತ್ತು ಬಟ್ಟೆ ಖರೀದಿಸಲು ಪ್ರಯತ್ನಿಸಿದ್ದಾಗ ಆತನ ಬಳಿ ಹಣ ಇರಲಿಲ್ಲ. ಈತನ ಪರಿಸ್ಥಿತಿಯನ್ನು ಗಮನಿಸಿದ ಅಂಗಡಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ದಕ್ಷಿಣ ಕನ್ನಡ ಪೊಲೀಸರಿಗೆ ವರ್ಗಾಯಿಸಿದ್ದಾಗಿ ತಿಳಿಸಿದರು.
ದಿಗಂತ್ ನನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮುಂದೆ ಹಾಜರುಪಡಿಸಿ,ಬೊಂದೇಲ್‌ನಲ್ಲಿರುವ ಮಕ್ಕಳ ರಕ್ಷಣಾ ಗೃಹದಲ್ಲಿ ಇರಿಸಲಾಗಿತ್ತು. ದಿಗಂತ್ ಎಲ್ಲಿದ್ದಾರೆ ಎಂಬ ಮಾಹಿತಿ ಕೋರಿ ದಿಗಂತ್ ಪೋಷಕರು ಕರ್ನಾಟಕ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಆತನನ್ನು ಹೈಕೋರ್ಟ್‌ಗೆ ಹಾಜರುಪಡಿಸಿ, ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಯತೀಶ್ ಹೇಳಿದರು.
ದಿಗಂತ್ ನಾಪತ್ತೆಯಾದ ನಂತರ, ಫರಂಗಿಪೇಟೆಯಲ್ಲಿ ಸ್ಥಳೀಯರು ನಡೆಸಿದ್ದ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟಾ ಪಾಲ್ಗೊಂಡಿದ್ದರು.