ಸಚಿವ ಹೆಚ್.ಕೆ.ಪಾಟೀಲ್ 
ರಾಜ್ಯ

ಕಾನೂನು ಮೂಲಕ ಮೈಕ್ರೋಫೈನಾನ್ಸ್‌ ಕಪ್ಪು ಹಣಕ್ಕೆ ಕಡಿವಾಣ: ರಾಜ್ಯ ಸರ್ಕಾರ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ವ್ಯವಹಾರದಲ್ಲಿ ಸುಮಾರು 40 ಸಾವಿರ ಕೋಟಿ ರೂ. ಚಲಾವಣೆಯಲ್ಲಿದೆ. ಇದು ಯಾರ ಹಣ? ಸರಕಾರದ ಅನುದಾನವಿಲ್ಲದೆ, ಆರ್‌ಬಿಐ ಸಹಾಯ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿರುವುದರ ಅರ್ಥವೇನು?

ಬೆಂಗಳೂರು: ಸಾಲ ನೀಡುವ ಸಂಸ್ಥೆಗಳು, ಕಿರುಬಂಡವಾಳ ಸಂಸ್ಥೆಗಳು ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸುವ ಸಾಧನಗಳಾಗಿ ಮಾರ್ಪಟ್ಟಿದ್ದು, ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ಸೋಮವಾರ ಹೇಳಿದರು.

ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಮೈಕ್ರೋ ಫೈನಾನ್ಸ್‌) ಮಸೂದೆಗೆ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ದೊರೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ವಿಧೇಯಕದ ಕುರಿತು ಮಾತನಾಡಿದ ಎಚ್‌ಕೆ ಪಾಟೀಲ್ ಅವರು, ನೋಂದಾಯಿತವಲ್ಲದ ಲೇವಾದೇವಿದಾರರನ್ನು ನಿಯಂತ್ರಿಸುವುದು, ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುವುದು ಮೊದಲಾದ ಅಂಶಗಳನ್ನು ಒಳಗೊಂಡಿದೆ. ಕಾನೂನು ಬದ್ಧ ಲೇವಾದೇವಿಯನ್ನು ನಿಷೇಧಿಸುವುದಿಲ್ಲ ಆದರೆ ಬಲವಂತವಾದ ಸಾಲ ವಸೂಲಾತಿಯನ್ನು ನಿರ್ಬಂಧಿಸಲಿದೆ. ಅಧಿಕ ಬಡ್ಡಿ ವಿಧಿಸಿ ತೊಂದರೆ ಕೊಡುವುದರಿಂದ ಸಾಲಗಾರರು ಬೀದಿಗೆ ಬರುವಂತಹ ಮತ್ತು ಆತಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ದೂಡುವುದನ್ನು ತಡೆಯಲು ಹಾಗೂ ತಪ್ಪಿತಸ್ಥರಿಗೆ 10 ವರ್ಷ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲು ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದು ಹೇಳಿದರು.

ಕಿರು ಸಾಲ ಮತ್ತು ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿ ಮಾಫಿಯಾಗಳು ಬಡ ಗ್ರಾಮೀಣ ನಿರ್ಗತಿಕರು, ನಗರ ಕಾರ್ಮಿಕರು, ಸಮಾಜದ ಅಶಕ್ತ ಮತ್ತು ದುರ್ಬಲದವರನ್ನು ಪೀಡಿಸುತ್ತಿದೆ ಮತ್ತು ಉಸಿರುಗಟ್ಟಿಸುವಂತಹ ಪ್ರಕರಣಗಳು ವರದಿಯಾಗಿವೆ. ದುಪ್ಪಟ್ಟು ಬಡ್ಡಿ ವಿಧಿಸಿ ತೊಂದರೆಗೆ ಸಾಲಗಾರರನ್ನು ಸಿಲುಕಿಸುವುದನ್ನು ತಡೆಯಲು ಈ ವಿಧೇಯಕ ತರಲಾಗಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕುವುದು, ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಕಿರುಕುಳ ತಪ್ಪಿಸುವ ಉದ್ದೇಶವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ವ್ಯವಹಾರದಲ್ಲಿ ಸುಮಾರು 40 ಸಾವಿರ ಕೋಟಿ ರೂ. ಚಲಾವಣೆಯಲ್ಲಿದೆ. ಇದು ಯಾರ ಹಣ? ಸರಕಾರದ ಅನುದಾನವಿಲ್ಲದೆ, ಆರ್‌ಬಿಐ ಸಹಾಯ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿರುವುದರ ಅರ್ಥವೇನು? ಇದೆಲ್ಲವೂ ಕಪ್ಪು ಹಣ ಎಂಬುದರಲ್ಲಿ ಅನುಮಾನ ಬೇಡ. ಬೇರೆ ಯಾವುದೇ ಪ್ರಾಮಾಣಿಕ ವ್ಯವಹಾರವು ಈ ರೀತಿಯ ಲಾಭವನ್ನು ಗಳಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಕಪ್ಪು ಹಣವನ್ನು ಹೂಡಿಕೆ ಮಾಡುತ್ತಾನೆ. ಇದಕ್ಕೆ ಪ್ರತಿಯಾಗಿ ಶೇ.40-50ರಷ್ಟು ಲಾಭವನ್ನು ಪಡೆಯುತ್ತಾನೆ. ಹಣ ಸಾಲ ನೀಡುವವರು ಶ್ರೀಮಂತರಷ್ಟೇ ಅಲ್ಲ, ನಿಮ್ಮ ಪ್ರತಿಸ್ಪರ್ಧಿಗಳಾಗುತ್ತಿದ್ದಾರೆ ಎಂದು ಶಾಸಕರಿಗೆ ತಿಳಿಸಿದರು.

ಕಪ್ಪು ಹಣ, ದೊಡ್ಡ ಲಾಭ ಮತ್ತು ರಾಜಕೀಯ ಶಕ್ತಿಯು ಸಮಾಜದ ಸ್ವಾಸ್ಥ್ಯವನ್ನು ಹಾನಿಗೊಳಿಸುತ್ತದೆ ಎಂದು ಅವರು ಹೇಳಿದರು.

ಹೊಸ ಕಾನೂನು ಶಿಕ್ಷೆಯನ್ನು ಹೆಚ್ಚಿಸಲಿದ್ದು, ಕ್ರಮ ಕೈಗೊಳ್ಳಲು ವಿಫಲರಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಮಾಹಿತಿ ನೀಡಿದರು.

ನಮ್ಮಲ್ಲಿ ಈಗಾಗಲೇ ಅನಿಯಂತ್ರಿತ ಠೇವಣಿ ಯೋಜನೆಗಳ ಕಾಯ್ದೆ 2019, ಕರ್ನಾಟಕ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ, ಕರ್ನಾಟಕ ಅತಿಯಾದ ಬಡ್ಡಿ ವಿಧಿಸುವುದನ್ನು ನಿಷೇಧಿಸುವ ಕಾಯ್ದೆ ಮತ್ತು ಕರ್ನಾಟಕ ಪಾನ್ ಬ್ರೋಕರ್ಸ್ ಕಾಯ್ದೆ ಇವೆ. ಆದರೆ, ನಮಗೆ ಸಮಗ್ರ ಕಾನೂನು ಬೇಕಿತ್ತು. ಅಸ್ತಿತ್ವದಲ್ಲಿರುವ ಕಾನೂನುಗಳು ರೂ. 1,000 ರಿಂದ ರೂ. 10,000 ವರೆಗಿನ ದಂಡ ಮತ್ತು ಒಂದು ದಿನದಿಂದ ಆರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ನೀಡುತ್ತದೆ. ಅಪರಾಧದ ಗಂಭೀರತೆಯನ್ನು ಲೆಕ್ಕಿಸದೆ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಜಾಮೀನು ಪಡೆದು, ಹೊರಬರಬಹುದಾಗಿದೆ. ಈ ಕಾನೂನುಗಳು ಕಠಿಣವಾಗಿಲ್ಲ. ಅದಕ್ಕಾಗಿಯೇ ರಾಜ್ಯ ಸರ್ಕಾರ ದಂಡವನ್ನು 5 ಲಕ್ಷ ರೂ.ಗಳಿಗೆ ಮತ್ತು ಜೈಲು ಶಿಕ್ಷೆಯನ್ನು 10 ವರ್ಷಗಳಿಗೆ ಹೆಚ್ಚಿಸಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ವಿಧೇಯಕ ಕುರಿತು ಪಕ್ಷ ಬೇಧ ಮರೆತು ಶಾಸಕರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು. ತುರುವೇಕೆರೆ ಶಾಸಕ ಟಿ. ಕೃಷ್ಣಪ್ಪ ಅವರು ಇದನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರಬೇಕು ಎಂದು ಹೇಳಿದರು. ಅನೇಕ ಅಧಿಕಾರಿಗಳು ಇಂತಹ ಮೈಕ್ರೋ ಫೈನಾನ್ಸಿಂಗ್ ಕಂಪನಿಗಳನ್ನು ಹೊಂದಿದ್ದಾರೆಂದು ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT