ವಿಧಾನಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆ 
ರಾಜ್ಯ

ಗ್ಯಾರಂಟಿ ಅನುಷ್ಟಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ: ವಿಧಾನಸಭೆಯಲ್ಲಿ ವಿಪಕ್ಷಗಳ ಗದ್ದಲ, ಕೋಲಾಹಲ!

ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಮೇಲ್ವಿಚಾರಣೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸುವ ಮೂಲಕ ಸರ್ಕಾರ ಶಾಸಕರ ಅಧಿಕಾರವನ್ನು ಮೊಟಕುಗೊಳಿಸಿದೆ ಎಂದು ಆರೋಪಿಸಿದ ಪ್ರತಿಪಕ್ಷಗಳು..

ಬೆಂಗಳೂರು: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಸದಸ್ಯರು ಧರಣಿ ನಡೆಸಿ, ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ವಿಧಾನಸಭೆಯಲ್ಲಿಂದು ಅಕ್ಷರಶ: ಕೋಲಾಹಲ ಉಂಟಾಯಿತು

ಶಾಸಕರ ಅಧಿಕಾರ ಮೊಟಕು ಆರೋಪ:

ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಮೇಲ್ವಿಚಾರಣೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸುವ ಮೂಲಕ ಸರ್ಕಾರ ಶಾಸಕರ ಅಧಿಕಾರವನ್ನು ಮೊಟಕುಗೊಳಿಸಿದೆ ಎಂದು ಆರೋಪಿಸಿದ ಪ್ರತಿಪಕ್ಷಗಳು, ಈ ಪಕ್ಷದ ಕಾರ್ಯಕರ್ತರಿಗೆ ಗೌರವಧನ ನೀಡಲು ರಾಜ್ಯದ ಬೊಕ್ಕಸದಿಂದ ಹಣವನ್ನು ಬಳಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದವು. ಈ ಎಲ್ಲ ಸಮಿತಿಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದವು. ಪ್ರತಿಪಕ್ಷಗಳ ಬೇಡಿಕೆಯನ್ನು ಸಚಿವ ಸಂಪುಟದಲ್ಲಿ ಪರಿಶೀಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭರವಸೆ ನೀಡಿದರು.

ದೊಡ್ಡ ಮಟ್ಟದ ವೇತನ: ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರು ಮತ್ತು ಐವರು ಉಪಾಧ್ಯಕ್ಷರಿಗೆ ರಾಜ್ಯ ಸಚಿವರ ಸೌಲಭ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳ ಅಧ್ಯಕ್ಷರಿಗೆ ಕ್ರಮವಾಗಿ ರೂ.40,000 ಮತ್ತು ರೂ.25,000 ಮಾಸಿಕ ಗೌರವಧನ ನೀಡಿರುವುದು ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಯಿತು. ಜಿಲ್ಲಾ ಸಮಿತಿಯ ಉಪಾಧ್ಯಕ್ಷರಿಗೆ ಮಾಸಿಕ 10 ಸಾವಿರ ಗೌರವಧನ ನೀಡಿದರೆ, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿ ಸದಸ್ಯರಿಗೆ ಕ್ರಮವಾಗಿ 1,100 ಮತ್ತು 1,000 ರೂ. ಗೌರವ ಧನ ನೀಡಲಾಗುತ್ತಿದೆ. ರಾಜ್ಯಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಐವರು ಉಪಾಧ್ಯಕ್ಷರು ಹಾಗೂ 31 ಮಂದಿ ಸದಸ್ಯರಿದ್ದಾರೆ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಐವರು ಉಪಾಧ್ಯಕ್ಷರು ಮತ್ತು 15 ಸದಸ್ಯರನ್ನು ಹೊಂದಿದ್ದರೆ, ತಾಲೂಕು ಮಟ್ಟದ ಸಮಿತಿಗೆ ಅಧ್ಯಕ್ಷರು, 14 ಮಂದಿ ಸದಸ್ಯರಿದ್ದಾರೆ.

ರಾಜ್ಯದ ಬೊಕ್ಕಸದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಹಣ:

ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಎಂ. ಪಿ. ಕೃಷ್ಣಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಸಮಿತಿಗೆ ಸರ್ಕಾರ ಏಕೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಿದೆ ಎಂದು ಎಂದು ಪ್ರಶ್ನಿಸಿದರು. ಶಾಸಕರು ಮತ್ತು ಅಧಿಕಾರಿಗಳು ಇಲ್ಲವೇ? ರಾಜ್ಯದ ಬೊಕ್ಕಸವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಈ ರೀತಿ ನೀಡಬಹುದೇ? ಈ ದೇಶದಲ್ಲಿ ವಿವಿಧ ಪಕ್ಷಗಳು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ, ಆದರೆ ಅದರ ಅನುಷ್ಠಾನಕ್ಕೆ ಎಂದಿಗೂ ಪಕ್ಷದ ಕಾರ್ಯಕರ್ತರನ್ನು ನೇಮಿಸಿಲ್ಲ. ಇದು ತಪ್ಪು. ಇದು ಕಾನೂನುಬಾಹಿರ ಎಂದರು. ಅನೇಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕೃಷ್ಣಪ್ಪ ಅವರೊಂದಿಗೆ ಸೇರಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಸಂಬಳ ಹೆಚ್ಚಿಸಲು ಹಿಂಜರಿಯುವ ಸರ್ಕಾರ, ಗ್ಯಾರಂಟಿ ಅನುಷ್ಟಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿ ದೊಡ್ಡ ಸಂಬಳ ನೀಡಲಾಗುತ್ತಿದೆ. ಏನಿದರ ಅರ್ಥ? ಎಲ್ಲಾ ಯೋಜನೆಗಳು ಡಿಬಿಟಿ ಮೂಲಕ ಆನ್ ಲೈನ್ ನಲ್ಲಿ ಅನುಷ್ಟಾನಗೊಳ್ಳುತ್ತಿರುವಾಗ ಇಂತಹ ಸಮಿತಿ ಏನು ಮಾಡುತ್ತವೆ ಎಂದು ಪ್ರಶ್ನಿಸಿದರು. ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ. ಸರ್ಕಾರದ ಹಣವನ್ನು ಕಾಂಗ್ರೆಸ್ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಲಾಪ ಕೆಲಕಾಲ ಮುಂದೂಡಿಕೆ: ಈ ವೇಳೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಈ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು. ಇದರಿಂದ ವಿಪಕ್ಷಗಳ ಸದಸ್ಯರು ಕೆರಳಿದ್ದರಿಂದ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ದಾಳಿ ನಡೆಯಿತು. ಮಧ್ಯ ಪ್ರವೇಶಿಸಿದ ಶಿವಕುಮಾರ್, ಇದು ಸರ್ಕಾರದ ಇಚ್ಛಾಶಕ್ತಿ. ಈ ಸರ್ಕಾರವನ್ನು ಅಧಿಕಾರಕ್ಕೆ ತಂದ ಪಕ್ಷದ ಕಾರ್ಯಕರ್ತರಿಗೆ ಈ ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಹಕ್ಕಿದೆ ಎಂದು ಸಮರ್ಥಿಸಿಕೊಂಡರು. ಗದ್ದಲ ಮುಂದುವರಿದ ಕಾರಣ ಸ್ಪೀಕರ್ ಯುಟಿ ಖಾದರ್ ಸದನವನ್ನು ಕೆಲಕಾಲ ಮುಂದೂಡಿದರು.

ಕಲಾಪ ಮತ್ತೆ ಸಮಾವೇಶಗೊಂಡಾಗ ಶಾಸಕರು ತಮ್ಮ ತಮ್ಮ ಭಾಗದಲ್ಲಿ ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ನೋಡಿಕೊಳ್ಳುತ್ತಾರೆ ಮತ್ತು ಶಾಸಕರನ್ನು ಕಡೆಗಣಿಸಿ ಈ ಸಮಿತಿಗಳನ್ನು ರಚಿಸುವುದು ಕಾನೂನುಬಾಹಿರ ಎಂದು ಕೃಷ್ಣಪ್ಪ ಹೇಳಿದರು.

ಶಾಸಕರ ಯಾವುದೇ ಅಧಿಕಾರ ಮೊಟಕುಗೊಳಿಸುತ್ತಿಲ್ಲ:

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರತಿಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿವೆ ಎಂದು ಆರೋಪಿಸಿದ ಶಿವಕುಮಾರ್, ಈ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೆ ಈ ಯೋಜನೆಗಳನ್ನು ನಿಲ್ಲಿಸುವುದು ಅಸಾಧ್ಯ. 52,000 ಕೋಟಿ ರೂ.ಗಳ ಯೋಜನೆಗಳ ಅನುಷ್ಠಾನದ ಮೇಲುಸ್ತುವಾರಿ ಮಾಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ನೀಡಿರುವುದನ್ನು ಪ್ರತಿಪಕ್ಷಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಾಸಕರ ಯಾವುದೇ ಅಧಿಕಾರವನ್ನು ಮೊಟಕುಗೊಳಿಸುತ್ತಿಲ್ಲ. ಒಂದು ವೇಳೆ ಆ ಸಮಿತಿಗೆ ಶಾಸಕರೇ ಮೇಲ್ವಿಚಾರಣೆ ಮಾಡಬೇಕೇ ಎಂಬುದರ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತಿಳಿಸುತ್ತೇವೆ ಎಂದು ಹೇಳಿದರು.

ಹಣಕಾಸು ಬಿಲ್ ಮಸೂದೆಗೆ ಬಿಡಲ್ಲ:

ಸರ್ಕಾರವನ್ನು ತೀವ್ರವಾಗಿ ಖಂಡಿಸಿದ ಅಶೋಕ, ಹಣಕಾಸು ಮಸೂದೆ ಅಂಗೀಕಾರಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸುವುದಾಗಿ ಎಚ್ಚರಿಸಿದರು. ಕಾಂಗ್ರೆಸ್ ಕಾರ್ಯಕರ್ತರ ಸಂತೋಷಕ್ಕಾಗಿ ರಾಜ್ಯದ ಬೊಕ್ಕಸದಿಂದ ಹಣ ಪಾವತಿಸುವುದನ್ನು ನಾವು ಏಕೆ ಅನುಮೋದಿಸಬೇಕು?" ಶಾಸಕರು ಚುನಾಯಿತರಾಗಿದ್ದಾರೆ ಮತ್ತು ಅವರ ಅಧಿಕಾರವನ್ನು ಮೊಟಕುಗೊಳಿಸಬಾರದು, ಅವರು "ಈ ಸಮಿತಿಗಳನ್ನು ರದ್ದುಗೊಳಿಸಬೇಕು. ಸಮಿತಿಯಲ್ಲಿ ಐದರಿಂದ ಹತ್ತು ಸದಸ್ಯರಿರಬಹುದು, ಆದರೆ ಶಾಸಕರ ನೇತೃತ್ವದಲ್ಲಿರಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸದನದ ಬಾವಿಗಿಳಿದು ವಿಪಕ್ಷಗಳ ಪ್ರತಿಭಟನೆ: ಮಹಾರಾಷ್ಟ್ರದಲ್ಲಿ ಬಿಜೆಪಿ ಸಚಿವರಿಗೆ ಆರೆಸ್ಸೆಸ್ ಕಾರ್ಯಕರ್ತರನ್ನು ಆಪ್ತ ಸಹಾಯಕರನ್ನಾಗಿ ನೇಮಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿದಂತೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಇದರ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ಆರಂಭಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸಾಲದ ಹೊರೆ! ಆದರೆ, ಇನ್ನೂ ಅಪಾಯದ ಗಂಟೆ ಮೊಳಗಿಲ್ಲ ಏಕೆ? ಇಲ್ಲಿದೆ ಮಾಹಿತಿ...

ಮಹಿಳಾ ಏಕದಿನ ವಿಶ್ವಕಪ್ 2025: ಚೊಚ್ಚಲ ಪ್ರಶಸ್ತಿ ಗೆದ್ದ ಬೆನ್ನಲ್ಲೇ 'ನಾಯಕತ್ವ' ತ್ಯಜಿಸಲು ಹರ್ಮನ್‌ಪ್ರೀತ್ ಕೌರ್ ಗೆ ಹೆಚ್ಚಿದ ಒತ್ತಡ! ಕಾರಣವೇನು?

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಈಗಿನ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ, ಗುಣಮಟ್ಟ ಕ್ಷೀಣ- ಸಿಎಂ ಸಿದ್ದರಾಮಯ್ಯ

ಭಾರತಕ್ಕೆ ಮೆಹುಲ್ ಚೋಕ್ಸಿ ಹಸ್ತಾಂತರ ಮುಂದೂಡಿಕೆ: 'ಸುಪ್ರೀಂ'ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹೊಸ ತಂತ್ರ!

ಭಾರತದಲ್ಲಿ ಕುಟುಂಬ ರಾಜಕೀಯ ಜನ್ಮಸಿದ್ಧ ಹಕ್ಕು ಎನ್ನುವಂತಾಗಿದೆ: ಶಶಿ ತರೂರ್

SCROLL FOR NEXT