ಬೆಂಗಳೂರು: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯನ್ನು ವಿರೋಧಿಸಲು ರಾಜ್ಯಗಳನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿ (ಜೆಎಸಿ) ರಚಿಸುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಕ್ಷೇತ್ರ ಮರು ವಿಂಗಡಣೆ ವಿರುದ್ಧವಾಗಿ ಮಾರ್ಚ್ 22 ರಂದು ಚೆನ್ನೈನಲ್ಲಿ ನಡೆಯುವ ಮೊದಲ ಸಭೆಗೆ ಆಗಮಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪತ್ರದ ಮೂಲಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ.
ಬುಧವಾರ ಸ್ಟಾಲಿನ್ ಸಂಪುಟದ ಸಚಿವರಾದ ಕೆ.ಪೊನ್ನುಮುಡಿ ಹಾಗೂ ರಾಜ್ಯಸಭಾ ಸದಸ್ಯ ಎಂ.ಎಂ.ಅಬ್ದುಲ್ಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಸ್ಟಾಲಿನ್ ಅವರ ಪತ್ರವನ್ನು ನೀಡಿದರು.
ಈ ವೇಳೆ ಖುದ್ದು ಸ್ಟಾಲಿನ್ ಅವರೂ ದೂರವಾಣಿ ಮೂಲಕ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದು, ಸಭೆಗೆ ಆಹ್ವಾನ ನೀಡಿದರು ಎಂದು ತಿಳಿದುಬಂದಿದೆ.
ಸ್ಟಾಲಿನ್ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕಸಭಾ ಕ್ಷೇತ್ರ ಮರು ವಿಂಗಡಣೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ನಡೆಗಳನ್ನು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಹೋರಾಟಕ್ಕೂ ಬೆಂಬಲ ನೀಡುತ್ತೇವೆಂದು ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
ಸ್ಟಾಲಿನ್ ಅವರ ಅಹ್ವಾನ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಅವರು, ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಇಂದು ನನ್ನನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಿದರು. ಸಚಿವರ ನಿಯೋಗದ ಭೇಟಿಗೂ ಮೊದಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ಹೋರಾಟದ ಬಗ್ಗೆ ಚರ್ಚಿಸಿದೆ.
ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ನನ್ನ ಬೆಂಬಲ ಸದಾ ಇರಲಿದೆ. ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ನಾವು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ತಮಿಳುನಾಡಿನಂತೆ ಕರ್ನಾಟಕ ಕೂಡ ಸಮಾನ ಅಭಿಪ್ರಾಯ ಹೊಂದಿದೆ ಎಂದು ಹೇಳಿದ್ದಾರೆ.
ಬಲ್ಲ ಮೂಲಗಳ ಪ್ರಕಾರ, ಚೆನ್ನೈನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಅವರು ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಸ್ಟಾಲಿನ್ ಪತ್ರದಲ್ಲೇನಿದೆ?
ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆ ಮಾನದಂಡಗಳು ರಾಷ್ಟ್ರೀಯ ಕರ್ತವ್ಯಗಳನ್ನು ಪೂರೈಸಿದ ರಾಜ್ಯಗಳಿಗೆ ಶಿಕ್ಷೆ ಹಾಕುವ ನಿಟ್ಟಿನಲ್ಲಿದೆ. ಜನಸಂಖ್ಯೆ ನಿಯಂತ್ರಣ ಮಾಡಿರುವ ರಾಜ್ಯಗಳಿಗೆ ಇದರಿಂದ ದೊಡ್ಡ ಅನ್ಯಾಯ ಆಗಲಿದೆ. ಹೀಗಿದ್ದರೂ ರಾಜ್ಯಗಳ ಕಳವಳಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸ್ಪಷ್ಟತೆ ಅಥವಾ ಯಾವುದೇ ನಿರ್ದಿಷ್ಟ ಬದ್ದತೆಯನ್ನು ಪ್ರದರ್ಶಿಸುತ್ತಿಲ್ಲ.
ಹೀಗಾಗಿ ಜಂಟಿ ಕ್ರಿಯಾ ಸಮಿತಿ ರೂಪಿಸಿದ್ದು, (ಜೆಎಸಿ) ಕೇಂದ್ರದ ಧೋರಣೆಯಿಂದ ಅನ್ಯಾಯಕ್ಕೆ ತುತ್ತಾಗುವ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ, ಪೂರ್ವ ಭಾರತದಿಂದ ಪಶ್ಚಿಮ ಬಂಗಾಳ, ಒಡಿಶಾ, ಉತ್ತರದಿಂದ ಪಂಜಾಬ್ ರಾಜ್ಯಗಳು ಸೇರಿ ನಿಮ್ಮ ಪಕ್ಷದಿಂದ ಒಬ್ಬ ಹಿರಿಯ ಪ್ರತಿನಿಧಿಯನ್ನು ಜೆಎಸಿಗೆ ನೇಮಿಸಿ ನಮ್ಮ ಒಗ್ಗಟ್ಟಿಗೆ ಸಹಕಾರ ನೀಡಬೇಕು.
ಅಲ್ಲದೆ, ಚೆನ್ನೈನಲ್ಲಿ ಮಾ.22 ರಂದು ಮೊದಲ ಸಭೆ ನಡೆಯಲಿದೆ. ಈ ವೇಳೆ ಭಾಗವಹಿಸಿ ಜನರ ಭವಿಷ್ಯವನ್ನು ಕಾಪಾಡಲು ಒಗ್ಗಟ್ಟಾಗಿ ನಿಲ್ಲೋಣ ಎಂದು ಸಿದ್ದರಾಮಯ್ಯ ಅವರಿಗೆ ಸ್ಟಾಲಿನ್ ಮನವಿ ಮಾಡಿದ್ದಾರೆ.