ಹಾವೇರಿ: ಶುಶ್ರೂಷಕಿ ಸ್ವಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಹಾವೇರಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ದುರ್ಗಾಚಾರಿ ಬಸವರಾಜಚಾರಿ ಬಡಿಗೇರ (25) ಹಾಗೂ ವಿನಾಯಕ ನಾಗಪ್ಪ ಪೂಜಾರ (27) ಎಂದು ಗುರ್ತಿಸಲಾಗಿದೆ.
ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರಿನ ಸ್ವಾತಿ ಅವರನ್ನು ಮಾರ್ಚ್ 3ರಂದು ಕೊಲೆ ಮಾಡಿ ಮೃತದೇಹವನ್ನು ತುಂಗಭದ್ರಾ ನದಿಯಲ್ಲಿ ಎಸೆಯಲಾಗಿತ್ತು. ಈ ಘಟನೆ ಜಿಲ್ಲೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಮೊದ ಮೊದಲು ಅಪರಿಚಿತ ಶವ ಸಿಕ್ಕಿರುವುದಾಗಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಅದು ಸ್ವಾಭಾವಿಕ ಸಾವಲ್ಲ. ಕೊಲೆ ಎಂಬುದು ತಿಳಿದುಬಂದಿತ್ತು. ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಹಲಗೇರಿ ಪೊಲೀಸ್ ಠಾಣೆ ಪೊಲೀಸರು ಒಬ್ಬ ಆರೋಪಿಯನ್ನು ಪತ್ತೆ ಮಾಡಿದ್ದರು. ನಯಾಜ್ ಎಂಬ ಮುಸ್ಲಿಂ ಯುವಕನೇ ಸ್ವಾತಿ ಹತ್ಯೆಯ ಪ್ರಮುಖ ಆರೋಪಿ.
ಸ್ವಾತಿ ಜೊತೆ ಲವ್ನಲ್ಲಿದ್ದ ಎನ್ನಲಾದ ನಯಾಜ್ ತನ್ನ ಮತ್ತಿಬ್ಬರು ಸ್ನೇಹಿತರ ಜೊತೆ ಸೇರಿ ಸ್ವಾತಿ ಕೊಲೆ ಮಾಡಿದ್ದಾನೆ. ಸದ್ಯ ನಯಾಜ್ನನ್ನು ಬಂಧಿಸಿ ತನಿಖೆ ಆರಂಭಿಸಿರುವ ಪೊಲೀಸರು, ಇದೀಗ ಮತ್ತಿಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧನ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ.
ಈ ನಡುವೆ ಸಂಸದ ಬಸವರಾಜ್ ಬೊಮ್ಮಾಯಿಯವರು ಶನಿವಾರ ಮೃತ ಸ್ವಾತಿಯವರ ತಾಯಿಯನ್ನು ಭೇಟಿ ಮಾಡಿ, ಸಂತಾಪ ಸೂಚಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಿ ಬ್ಯಾಡಗಿ ಹತ್ಯೆ ಆಘಾತ ಉಂಟು ಮಾಡಿದೆ. ಸ್ವಾತಿ ತಾಯಿ ಸಣ್ಣ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡಿದ್ದಾರೆ. ಕಷ್ಟ ಪಟ್ಟು ತಮ್ಮ ಮೂವರು ಮಕ್ಕಳನ್ನು ಬೆಳೆಸಿದ್ದಾರೆ. ಚೆನ್ನಾಗಿ ಓದಿಸಿದ್ದಾರೆ. ಅವರು ಕೆಲಸ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹದರಲ್ಲಿ ಈ ರೀತಿ ಘಟನೆಯಾಗಿರುವುದು ಆಘಾತ ತಂದಿದೆ ಎಂದು ಹೇಳಿದರು.
ಈ ರೀತಿಯ ಘಟನೆಗಳು ಸಾಮಾಜಿಕ ಪಿಡುಗಾಗಿದೆ. ಬೆಳೆಯುವ ವಯಸ್ಸಿನ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸಿ, ಬೇರೆ ಬೇರೆ ಆಮಿಷವೊಡ್ಡಿ ಅವರನ್ನು ಜಾಲದಲ್ಲಿ ಸಿಲುಕಿಸಿ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ನಡೆದ ಘಟನೆಯನ್ನ ಊರಲ್ಲಿ ಹಿರಿಯರ ಗಮನಕ್ಕೆ ತಂದು ಬಗೆ ಹರಿಸಬಹುದಿತ್ತು. ಅದನ್ನು ಬಿಟ್ಟು ಅಮಾನೀಯವಾಗಿ, ಅಮಾನುಷವಾಗಿ ಹೆಣ್ಣು ಮಗಳನ್ನು ಕೊಲೆ ಮಾಡುವಂಥದ್ದು ಅತ್ಯಂತ ಹೀನ ಕೃತ್ಯ ಎಂದರು.
ಈ ರೀತಿಯ ಘಟನೆಗಳನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಸ್ವಾತಿ ದೇಹ ಸಿಕ್ಕಿದ್ದು ನಂತರ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗಿದೆ. ಅವರ ತಾಯಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದು, ಆಮೇಲೆ ಆರೋಪಿ ಬಂಧಿಸಿರುವುದನ್ನು ನೋಡಿದರೆ ಘಟನೆಯಲ್ಲಿ ಪೊಲೀಸ್ ಲೋಪವಾಗಿದೆ ಎಂದು ಆರೋಪಿಸಿದರು.
ಇದರಲ್ಲಿ ಮೇಲ್ನೋಟಕ್ಕೆ ಲವ್ ಜಿಹಾದ್ ಅಂತ ಅನಿಸುತ್ತದೆ. ಸಂಪೂರ್ಣ ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ. ಇದು ಮೇಲ್ನೋಟಕ್ಕೆ ಪ್ರೇಮ ಪ್ರಕರಣ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ಜಾಡು ಹಿಡಿದು ತನಿಖೆ ಮಾಡಿದಾಗ ಮಾತ್ರ ಸತ್ಯ ಹೊರ ಬರಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದು ಸಣ್ಣ ವಿಷಯ. ಕಾನೂನು ಸುವ್ಯವಸ್ಥೆಯೇ ಇಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿಯೂ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದು ಖೇದಕರ. ಈ ರೀತಿಯ ಕೃತ್ಯ ಮಾಡುತ್ತಿರುವವರಿಗೆ ಯಾವುದೇ ಭಯವಿಲ್ಲದಂತಾಗಿದೆ ಎಂದು ಹೇಳಿದರು.