ಬೆಂಗಳೂರು: ಖಾಸಗಿ ಅಂಗಕ್ಕೆ ಹೊಡೆದು ಕೊಲೆಗೆ ಪ್ರಯತ್ನಿಸಲಾಗಿದೆ ಎಂದು ಆರೋಪಿಸಿ ನಗರದ ಟೆಕ್ಕಿಯೊಬ್ಬ ತನ್ನ ಹೆಂಡತಿ ವಿರುದ್ಧವೇ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಆಕೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳು ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಈ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಣಕ್ಕಾಗಿ ತನ್ನ ಹೆಂಡತಿ ಹಾಗೂ ಆಕೆಯ ಕುಟುಂಬದವರು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರುದಾರ ಶ್ರೀಕಾಂತ್ ಆರೋಪಿಸಿದ್ದಾರೆ.
ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾಗ ಆಗಾಗ್ಗೆ ತನ್ನ ಹೆಂಡತಿ ಮಾಡುತ್ತಿದ್ದ ಜಗಳ ಹಾಗೂ ಅಡ್ಡಿಯಿಂದ ಕೆಲಸ ಕಳೆದುಕೊಂಡಿದ್ದೇನೆ. ವಿಡಿಯೋ ಕಾಲ್ ವೇಳೆಯಲ್ಲಿ ಆಕೆ ಲ್ಯಾಪ್ ಟಾಪ್ ಮುಂದೆ ನಿಂತು ಡ್ಯಾನ್ಯ್ ಮಾಡುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಿವೋರ್ಸ್ ಕೇಳಿದಾಗ ರೂ. 45 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಳೆ. ಆಗಸ್ಟ್ 2022 ರಲ್ಲಿ ಮದುವೆಯಾದಾಗಿನಿಂದಲೂ ಒಂದು ದಿನವೂ ನೆಮ್ಮದಿಯಾಗಿ ಒಟ್ಟಾಗಿ ಬಾಳುವುದಕ್ಕೆ ಆಗಿಲ್ಲ. ಆಕೆಯ ಮನವೊಲಿಸಲು ಪ್ರಯತ್ನಿಸಿದರೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಅಲ್ಲದೇ ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದು, ತನ್ನ ಖಾಸಗಿ ಅಂಗಗಳಿಗೆ ಹೊಡೆದು ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ.
ಮನೆ ಖರೀದಿಸಲು ತನ್ನ ಪತ್ನಿಯ ಕುಟುಂಬ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿತ್ತು. ಅದನ್ನು ಕೊಡಲು ನಿರಾಕರಿಸಿದಾಗ ಕಿರುಕುಳ ಹೆಚ್ಚಾಯಿತು ಎಂದು ಎಂದು ಶ್ರೀಕಾಂತ್ ಆರೋಪಿಸಿದ್ದಾರೆ.
ಪೊಲೀಸರು ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಹೊಂದಾಣಿಕೆ ಕೊರತೆಯಿಂದ ಆತನೊಂದಿಗೆ ಬಾಳಲು ಇಷ್ಟವಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ವೈವಾಹಿಕ ಭಿನ್ನಾಭಿಪ್ರಾಯ ಮತ್ತು ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಈಗ ಮತ್ತೊಂದು ಕೇಸ್ ದಾಖಲಾಗಿದೆ. ಜನವರಿ 28 ರಂದು ಹುಬ್ಬಳ್ಳಿಯಲ್ಲಿ ಪೀಟರ್ ಎಂಬ ವ್ಯಕ್ತಿ ತನ್ನ ಹೆಂಡತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿತ್ತು.