ಬೆಂಗಳೂರು: ಇತ್ತೀಚೆಗಷ್ಟೇ ಏರಿಕೆಯಾಗಿದ್ದ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದ್ದು, ಮುಂದಿನ ಸಂಪುಟ ಸಭೆ ಬಳಿಕ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಇಂದು ಸರ್ಕಾರ ತೀರ್ಮಾನ ಕೈಗೊಳ್ಳಲಿದ್ದು, ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಾಗುವ ಸಾಧ್ಯತೆ ಇವೆ ಎನ್ನಲಾಗಿದೆ. ಮೂಲಗಳ ಪ್ರಕಾರ ಕರ್ನಾಟಕ ಹಾಲು ಮಹಾ ಮಂಡಳ ಪ್ರತಿ ಲೀಟರ್ ಹಾಲಿಗೆ 5 ರೂ. ಏರಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ.
ಹಾಲಿನ ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಹಾಗೂ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಹಾಲಿನ ದರ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಕೆಎಂಎಫ್ ಸಲ್ಲಿಸಿರುವ 5 ರೂ. ಹಾಲಿನ ದರ ಏರಿಕೆ ಬದಲು ಪ್ರತಿ ಲೀಟರ್‌ಗೆ 3 ರೂ. ದರ ಹೆಚ್ಚಳ ಮಾಡಲು ಈ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ (milk price) ಹೆಚ್ಚಳ ಮಾಡಬೇಕೆಂದು ನಿರ್ಧಾರವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳ ಸಂಬಂಧ ಸಂಪುಟ ಸಭೆಯಲ್ಲಿ ನಿರ್ಧಾರವಾಗುತ್ತದೆ.
ಹಾಲಿನ ದರ ಎಷ್ಟು ಹೆಚ್ಚಳ ಮಾಡಬೇಕೆಂದು ಸಿಎಂ ಸಭೆ ಬಳಿಕ ಹೇಳುತ್ತಾರೆ. ಹಾಲು ಒಕ್ಕೂಟಗಳು, ಹಾಲು ಉತ್ಪಾದಕರ ಬೇಡಿಕೆ ಮನವರಿಕೆ ಮಾಡಲಾಗಿದೆ. ಹಾಲು ಉತ್ಪಾದಕರು ಮತ್ತು ಗ್ರಾಹಕರು 2 ಕಣ್ಣುಗಳು ಇದ್ದಂತೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.
ಈಗಾಗಲೇ ಸಾರಿಗೆ ಬಸ್ ದರ, ವಿದ್ಯುತ್, ಮೆಟ್ರೋ ಪ್ರಯಾಣ ದರಗಳು ಏರಿಕೆಯಾಗಿದ್ದು, ಹಾಲಿನ ದರ ಏರಿಕೆಯೂ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.