ಬೆಂಗಳೂರು: ರಾಜ್ಯ ರಾಜಕಾರಣ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಭಾರಿ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಮಂಗಳವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದಾರೆ.
ಇಂದು ಸಂಜೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹ ಸಚಿವ ಪರಮೇಶ್ವರ ಅವರ ನಿವಾಸಕ್ಕೆ ಭೇಟಿ ನೀಡಿದ ರಾಜಣ್ಣ ಅವರು, ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಲಿಖಿತ ಮನವಿ ನೀಡಿದರು.
ಬಳಿಕ ರಾಜಣ್ಣ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪರಮೇಶ್ವರ ಅವರು, ಈ ವಿಚಾರದಲ್ಲಿ ನಾನು ದೂರು ಸ್ವೀಕರಿಸಲು ಸಾಧ್ಯವಿಲ್ಲ. ಪೊಲೀಸ್ ಠಾಣೆಯಲ್ಲೇ ದೂರು ಸಲ್ಲಿಸಬೇಕು. ನಾನು ಮನವಿ ಮಾತ್ರ ಸ್ವೀಕರಿಸಿದ್ದೇನೆ. ಈ ಮನವಿ ಆಧಾರದ ಮೇಲೆ ಕಾನೂನು ತಜ್ಞರ ಜೊತೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ರಾಜಣ್ಣ ಅವರು ಸದನದಲ್ಲಿ ತಮಗೂ ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿದೆ. ಈ ಬಗ್ಗೆ ಗೃಹ ಸಚಿವರಿಗೆ ಮನವಿ ಕೊಡುತ್ತೇನೆ ಎಂದು ಹೇಳಿದ್ದರು. ಇದು ನಿಜಾ ಆಗಿದ್ರೆ ಉನ್ನತ ಮಟ್ಟದ ತನಿಖೆ ಮಾಡುವುದಾಗಿ ಹೇಳಿದ್ದೆ. ಆದ್ರೆ, ರಾಜಣ್ಣ ಅವರಿಗೆ ಪೂರ್ವ ನಿಯೋಜಿತ ಕೆಲಸದ ನಡುವೆ ನನಗೆ ಮನವಿ ಕೊಡಲು ಆಗಲಿಲ್ಲ. ಇಂದು ನನಗೆ ಮನವಿ ಕೊಟ್ಟಿದ್ದಾರೆ. ವಿಧಾನಸಭೆಯಲ್ಲ ಪ್ರಸ್ತಾಪಿಸಿದಂತೆ ಮನವಿ ಕೊಟ್ಟಿದ್ದು, ಮುಂದಿನ ಕ್ರಮದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದರು.
ಬಳಿಕ ಮಾತನಾಡಿದ ರಾಜಣ್ಣ ಅವರು, ಹನಿಟ್ರ್ಯಾಪ್ ಸಂಬಂಧ ಸದನದಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಆ ಕಾರಣದಿಂದ ನಾನು ದೂರು ಸಲ್ಲಿಸಿದ್ದೇನೆ. ಈ ರೀತಿಯ ಕೆಟ್ಟ ಚಾಳಿ ಸಾರ್ವಜನಿಕ ಜೀವನದಲ್ಲಿ ಮುಂದುವರೆಯಬಾರದು ಎಂದರು.
ದೂರು ನೀಡಿದರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದರು. ಅದರಂತೆ ಇಂದು ನಾನು ದೂರು ಸಲ್ಲಿಸಿದ್ದೇನೆ ಎಂದರು.