ಬೆಂಗಳೂರು: ಬೈಕಿಗೆ ಡಿಕ್ಕಿ ಹೊಡೆದ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್ಸೊಂದು, ಸವಾರ ಹಾಗೂ ಪಾದಚಾರಿ ವ್ಯಕ್ತಿಯನ್ನು 50 ಮೀಟರ್ ಎಳೆದೊಯ್ದ ಘಟನೆ ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯ ಮುರುಗೇಶಪಾಳ್ಯ ಸಿಗ್ನಲ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹಳೇ ವಿಮಾನ ನಿಲ್ದಾಣದ ಮುರುಗೇಶಪಾಳ್ಯ ಸಿಗ್ನಲ್‌ನಲ್ಲಿ ಇ-ಕಾಮರ್ಸ್ ಬೈಕ್ ಸವಾರ ಯೂಟರ್ನ್ ತೆಗೆದುಕೊಂಡಿದ್ದ. ಅದೇ ರಸ್ತೆಯಲ್ಲಿ ಜಿಮ್ ಮುಗಿಸಿ ಬರುತ್ತಿದ್ದ ಪಾದಚಾರಿಯೊಬ್ಬರು ಡಿವೈಡರ್ ಕ್ರಾಸ್ ಮಾಡಿ, ರಸ್ತೆ ದಾಟುತ್ತಿದ್ದರು.
ಈ ವೇಳೆ KA51 AJ6167 ನಂಬರಿನ ಬಸ್ ಇಬ್ಬರಿಗೂ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ.
ಜೀವನ್ ಭೀಮಾನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಮೃತರ ಗುರುತು ಪತ್ತೆಹಚ್ಚಲು ಮುಂದಾಗಿದ್ದಾರೆ.
ಘಟನೆ ವೇಳೆ ಪ್ರತ್ಯಕ್ಷದರ್ಶಿಯಾಗಿರುವ ಕ್ಯಾಬ್ ಚಾಲಕ ಬಾಲಾಜಿ ಎಂಬುವವರು ಮಾತನಾಡಿ, ಇಬ್ಬರೂ ಎದುರು ಭಾಗದಿಂದ ಬರುತ್ತಿದ್ದರು. ಜಿಮ್ ನಿಂದ ಬರುತ್ತಿದ್ದ ವ್ಯಕ್ತಿ ರಸ್ತೆ ದಾಟುತ್ತಿದ್ದರು. ರ್ಯಾಪಿಡೋ ಚಾಲಕ ಯೂಟರ್ನ್ ತೆಗೆದುಕೊಳ್ಳಲು ಯತ್ನಿಸುತ್ತಿದ್ದ. ಈ ವೇಳೆ ವಿರುದ್ಧ ದಿಕ್ಕಿನಿಂದ ಬಸ್ ಇಬ್ಬರಿಗೂ ಡಿಕ್ಕಿ ಹೊಡೆಯಿತು. ಇಬ್ಬರು ಬಸ್ ಚಕ್ರದಡಿ ಸಿಲುಕಿಕೊಂಡಿದ್ದರೂ ಚಾಲಕ 50 ಮೀಟರ್ ಗಳಷ್ಟು ಎಳೆದುಕೊಂಡು ಹೋಗಿದ್ದ ಎಂದು ಹೇಳಿದ್ದಾರೆ.
ಇಬ್ಬರನ್ನೂ ಆ್ಯಂಬುಲೆನ್ಸ್ ನಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.
ಜೀವನ್ ಬಿಮಾ ನಗರ ಇನ್ಸ್‌ಪೆಕ್ಟರ್ ನಟರಾಜ್ ಅವರು ಮಾತನಾಡಿ, ಅಪಘಾತಕ್ಕೂ ಮುನ್ನ ಅದೇ ಸ್ಥಳದಲ್ಲಿ ನಾನಿದ್ದೆ. ಶಿಫ್ಟ್ ಮುಗಿದ ಹಿನ್ನೆಲೆಯಲ್ಲಿ ಆಗಷ್ಟೇ ಮನೆಗೆ ಹಿಂತಿರುಗಿದ್ದೆ. ನನ್ನ ಅಧಿಕೃತ ಕಾರನ್ನು ಮನೆಗೆ ಕಳುಹಿಸಿದ್ದೆ. ಅಪಘಾತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆಟೋ ರಿಕ್ಷಾದಲ್ಲಿ ಸ್ಥಳಕ್ಕೆ ಧಾವಿಸಿದ್ದೆ. ಇದೀಗ ಇನ್ನೂ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಅತಿವೇಗದಿಂದ ಬಸ್ ಚಲಾಯಿಸಿದ ಕಾರಣ ಅಪಘಾತವಾಗಿದೆ ಎಂದು ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳದಿಂದ 100 ಮೀಟರ್ ದೂರದಲ್ಲಿ ಬಸ್ ನಿಂತಿತ್ತು. ಬಳಿಕ ಬಸ್ ನ್ನು ಬದಿಗೆ ಸರಿಸಲು ಪೊಲೀಸರಿಗೆ ಸಹಾಯ ಮಾಡಿದ್ದೆ ಎಂದು ಲಾರಿ ಚಾಲಕ ಶಂಕರ್ ಎಂಬುವವರು ಹೇಳಿದ್ದಾರೆ.
ಏತನ್ಮಧ್ಯೆ, ಅಪಘಾತದಿಂದಾಗಿ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸುಮಾರು ಒಂದು ಗಂಟೆ ಕಾಲ ಸಂಚಾರ ಅಸ್ತವ್ಯಸ್ತವಾಗಿ, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.