ಬೆಂಗಳೂರು: ಜಾರಿ ನಿರ್ದೇಶನಾಲಯ(ಇಡಿ) ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಹೊರಡಿಸಿದೆ.
ಐಶ್ವರ್ಯ ಗೌಡಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 24-25 ರಂದು ಕರ್ನಾಟಕದ 14 ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು. ಐಶ್ವರ್ಯ ಗೌಡ ಅವರ ಬೆಂಗಳೂರು ಹಾಗೂ ಮಂಡ್ಯ ನಿವಾಸ ಮತ್ತು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲ(ED)ಯದ ಅಧಿಕಾರಿಗಳು ದಾಳಿ ನಡೆಸಿದ್ದರು.
ತಮ್ಮ ಮನೆ ಮೇಲಿನ ಇಡಿ ದಾಳಿ ಕಾನೂನುಬಾಹಿರ ಎಂದು ಘೋಷಿಸಬೇಕು ಮತ್ತು ಇಡಿ ಸಮನ್ಸ್ ರದ್ದುಗೊಳಿಸುವಂತೆ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ರಜಾ ಕಾಲದ ಏಕ ಸದಸ್ಯ ಪೀಠ ಈ ಮಧ್ಯಂತರ ಆದೇಶ ಹೊರಡಿಸಿದೆ.
ಇಡಿ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‌ಜಿ) ಅರವಿಂದ್ ಕಾಮತ್ ಅವರು, ಬಲವಾದ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು, ಆರೋಪಿಯ ಅರ್ಜಿಯ ವಿರುದ್ಧ ವಾದಿಸಲು ತಮಗೆ ನ್ಯಾಯಯುತ ಅವಕಾಶ ನೀಡಿಲ್ಲ ಎಂದು ಹೇಳಿದರು.
ಪ್ರಕರಣ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಮಧ್ಯಂತರ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಕೆಗೆ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇದೆ ಎಂದು ತಿಳಿಸಿದೆ.
ನ್ಯಾಯಾಲಯದಲ್ಲಿದ್ದ ಕೇಂದ್ರ ಸರ್ಕಾರದ ಪರ ವಕೀಲರು, ನಮ್ಮ ವಾದ ಆಲಿಸದೆ ಮಧ್ಯಂತರ ಆದೇಶ ನೀಡಬಾರದು ಎಂದು ಮನವಿ ಮಾಡಿದರು. ಅದಕ್ಕೆ ಪೀಠ, ನಮ್ಮ ಆದೇಶವನ್ನು ಪ್ರಶ್ನೆ ಮಾಡಬಹುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಈ ಹಿಂದೆ ನಡೆದ ಅರ್ಜಿ ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪರ ವಕೀಲರು, "ಪಿಎಂಎಲ್ಎ ಅಡಿ ಅಧಿಕಾರಿ ನಮ್ಮ ಕಕ್ಷಿದಾರರಿಗೆ ಸಮನ್ಸ್ ಜಾರಿ ಮಾಡಿಲ್ಲ. ಜಪ್ತಿ ಸಂದರ್ಭದಲ್ಲಿ ವಿನಯ್ ಕುಲಕರ್ಣಿ ಅವರ ಮನೆಯಲ್ಲಿ ಇ.ಡಿ ಅಧಿಕಾರಿಗಳಿಗೆ ಏನೂ ದೊರೆತಿಲ್ಲ. ಹೀಗಿರುವಾಗ ವಿನಯ್ ಕುಲಕರ್ಣಿ ಹೇಳಿಕೆ ದಾಖಲಿಸಿಕೊಳ್ಳುವಂತಿರಲಿಲ್ಲ. ಸಮನ್ಸ್ನಲ್ಲಿ ಮೂಲ ಅಪರಾಧ (ಪ್ರೆಡಿಕೇಟ್ ಅಪರಾಧ) ಯಾವುದು ಎಂದು ಹೇಳಿಲ್ಲ. ಐಶ್ವರ್ಯಾ ಗೌಡ ರಿಮ್ಯಾಂಡ್ ಅರ್ಜಿಯಲ್ಲಿಯೂ ವಿನಯ್ ಕುಲಕರ್ಣಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ" ಎಂದು ವಾದಿಸಿದ್ದರು.