ಬೆಂಗಳೂರು: ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್(33) ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಆರ್ಥಿಕ ವ್ಯವಹಾರಗಳ ವಿಶೇಷ ಕೋರ್ಟ್, 2 ಲಕ್ಷ ರೂ.ಗಳ ಎರಡು ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿದ್ದು, ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೋಗಬಾರದು ಮತ್ತು ಮುಂದೆ ಯಾವತ್ತೂ ಇಂಥ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಷರತ್ತುಬದ್ಧ ವಿಧಿಸಲಾಗಿದೆ.
ಕಳೆದ ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.
ರನ್ಯಾ ರಾವ್ ಮತ್ತು ಅವರ ಸಹಚರರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಜಾಮೀನು ನೀಡಲಾಗಿದ್ದರೂ, ರನ್ಯಾ ರಾವ್ ಮತ್ತು ಅವರ ಇಬ್ಬರು ಸಹಚರರಾದ ತರುಣ್ ಕೊಡೂರು ರಾಜು ಹಾಗೂ ಸಾಹಿಲ್ ಸಕರಿಯಾ ಜೈನ್ ಅವರನ್ನು ಕಠಿಣ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ 1974(COFEPOSA ಕಾಯ್ದೆ, 1974) ಅಡಿಯಲ್ಲಿ ಬಂಧಿಸಿರುವುದರಿಂದ ನಟಿಯನ್ನು ಜೈಲಿನಿಂದ ಬಿಡುಗಡೆ ಮಾಡುವುದು ಅನುಮಾನ ಎನ್ನಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಶಿಫಾರಸಿನ ಮೇರೆಗೆ ನಟಿ ಮತ್ತು ಇತರ ಆರೋಪಿಗಳ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ (CEIB)COFEPOSA ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆ ಅನ್ವಯ ಆರೋಪಿ ರನ್ಯಾ ರಾವ್‌ಗೆ ಒಂದು ವರ್ಷ ಜಾಮೀನು ಪಡೆಯಲು ಅವಕಾಶವಿರುವುದಿಲ್ಲ.