ಎಚ್. ಡಿ. ಕುಮಾರಸ್ವಾಮಿ 
ರಾಜ್ಯ

ಮಳೆ ಹಾನಿ ಪ್ರದೇಶಗಳಿಗೆ ಸಚಿವರನ್ನು ನಿಯೋಜಿಸಿ, ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಿ: ಕುಮಾರಸ್ವಾಮಿ ಒತ್ತಾಯ

ಬೆಳಗ್ಗೆಯಿಂದ ಸಾಧನಾ ಸಮಾವೇಶ ಮಾಡಿದ್ದು ಸಾಕು. ನಿಮ್ಮ ಗ್ಯಾರಂಟಿ ನಾಟಕವೂ ಸಾಕು. ಮೊದಲು ಬೆಂಗಳೂರು ಸೇರಿ ರಾಜ್ಯದ ಉದ್ದಗಲಕ್ಕೂ ಆಗಿರುವ ಮಳೆ ಅನಾಹುತದ ಕಡೆ ಗಮನ ಹರಿಸಿ.

ಬೆಂಗಳೂರು: ರಾಜ್ಯಾದ್ಯಂತ ಮಳೆಹಾನಿ ಪ್ರದೇಶಗಳಿಗೆ ಸಚಿವರನ್ನು ನಿಯೋಜಿಸಿ, ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳುವಂತೆ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಳೆಯಿಂದ ಜನರು ಅನುಭವಿಸುತ್ತಿರುವ ತೊಂದರೆಯ ವಿಡಿಯೋ ದೊಂದಿಗೆ ಸರಣಿ ಫೋಸ್ಟ್ ಮಾಡಿರುವ ಕುಮಾರಸ್ವಾಮಿ, ಬೆಳಗ್ಗೆಯಿಂದ ಸಾಧನಾ ಸಮಾವೇಶ ಮಾಡಿದ್ದು ಸಾಕು. ನಿಮ್ಮ ಗ್ಯಾರಂಟಿ ನಾಟಕವೂ ಸಾಕು. ಮೊದಲು ಬೆಂಗಳೂರು ಸೇರಿ ರಾಜ್ಯದ ಉದ್ದಗಲಕ್ಕೂ ಆಗಿರುವ ಮಳೆ ಅನಾಹುತದ ಕಡೆ ಗಮನ ಹರಿಸಿ. ಇಡೀ ರಾಷ್ಟ್ರಕ್ಕೆ ಮಾದರಿ ನಗರ ಆಗಿದ್ದ ಬೆಂಗಳೂರು ದುಸ್ಥಿತಿಯನ್ನು ಸರಿಪಡಿಸಿ. ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿ ಎಂದು ತಾಕೀತು ಮಾಡಿದ್ದಾರೆ.

ಬ್ರ್ಯಾಂಡೆಡ್ ನರಕದಲ್ಲಿ ಬೆಂಗಳೂರು ಜನ: ಜನ ಸತ್ತು ಬದುಕುತ್ತಿದ್ದರೆ ಕಾಂಗ್ರೆಸ್ ನಾಯಕರಿಗೆ ಸಾಧನಾ ಸಮಾವೇಶದ ಚಿಂತೆ, ವಾರದಿಂದ ಬಣ್ಣಬಣ್ಣದ ಸರಣಿ ಗ್ಯಾರಂಟಿ ಜಾಹೀರಾತು ಬೇರೆ. ಬೆಂಗಳೂರು ಜನ ಬ್ರ್ಯಾಂಡೆಡ್ ನರಕದಲ್ಲಿದ್ದಾರೆ. ನಗರ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು. ಕಾಂಗ್ರೆಸ್ ಸರಕಾರದ ಸಾಧನೆ ಬೆಂಗಳೂರು ರಸ್ತೆಗಳಲ್ಲಿ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಸತ್ತ ಸರಕಾರಕ್ಕೆ ಸಾಧನೆ ಸಮಾವೇಶ ಬೇರೆ ಕೇಡು ಎಂದು ಕಿಡಿಕಾರಿದ್ದಾರೆ.

ಯಾವ ಪುರುಷಾರ್ಥಕ್ಕೆ ಗ್ರೇಟರ್‌ ಬೆಂಗಳೂರು? ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತಿನ ಡಬ್ಬಾ ಹೊಡೆಯುವುದು ಬಿಟ್ಟು, ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಪಕ್ಕಕ್ಕಿಟ್ಟು ಕೆಲಸ ಮಾಡಲಿ. ವಾರ್ ರೂಂನಲ್ಲಿ ಕೂತು ಪ್ರತಿಪಕ್ಷಗಳ ಮೇಲೆ ಪ್ರಾಕ್ಸಿವಾರ್ ಮಾಡಿದರೆ ಪ್ರಯೋಜನವೇನು? ಕೈಲಾಗದವನಿಗೆ

ಬಾಯಿ ಭದ್ರ ಇರುವುದಿಲ್ಲ. ಈ ಮನುಷ್ಯ ಆ ಪರಿಸ್ಥಿತಿಯಲ್ಲಿದ್ದಾರೆ! ಯಾವ ಪುರುಷಾರ್ಥಕ್ಕೆ ಗ್ರೇಟರ್‌ ಬೆಂಗಳೂರು? ಯಾರ ಉದ್ಧಾರಕ್ಕೆ ಬ್ರ್ಯಾಂಡ್‌ ಬೆಂಗಳೂರು? ಲೂಟಿ ಹೊಡೆಯೋದಕ್ಕೆ ಹೊಸ ಹೊಸ ಹೆಸರೇ?! ಎರಡು ವರ್ಷಗಳಿಂದ ಬ್ರ್ಯಾಂಡ್‌.. ಬ್ರ್ಯಾಂಡ್‌.. ಎಂದು ಭಜನೆ ಮಾಡುತ್ತಿದ್ದೀರಲ್ಲ.. ಬ್ರ್ಯಾಂಡ್‌ ಎಂದರೆ ಬೆಂಗಳೂರನ್ನು ಮುಳುಗಿಸುವುದಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ: ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಈ ವ್ಯಕ್ತಿ ಪಾಲಿಗೆ ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ. ಬಯಸಿದಾಗ ನೋಟಿನ ಮಳೆ ಸುರಿಸುವ ಅಕ್ಷಯಪಾತ್ರೆ!! ಎರಡು ವರ್ಷಗಳಿಂದ ಸುರಿದ ನೋಟಿನ ಮಳೆ ಪ್ರಮಾಣ ಎಷ್ಟು? ಕೈ ಇಟ್ಟ ಕಡೆಯಲ್ಲಾ ದುಡ್ಡು! ಜನರ ಮೇಲೆ ತೆರಿಗೆ ಮೇಲೆ ತೆರಿಗೆ! ಎರಡು ವರ್ಷಗಳಲ್ಲಿ ಎಷ್ಟೊಂದು ಬಾರಿ ಸಾಯಿ ಬಡವಾಣೆ ಮುಳುಗಿತು? ಅಲ್ಲಿಗೆ ಡಿಸಿಎಂ ಎಷ್ಟು ಸಲ ಹೋಗಿದ್ದರು? ಈ ಹಿಂದೆ ನಗರಾಭಿವೃದ್ಧಿ ಮಂತ್ರಿ ಆಗಿದ್ದಾಗ ನಗರಕ್ಕೇನು ಮಾಡಿದ್ದರು? ಸಚಿವಗಿರಿಯನ್ನು ಸ್ವ-ನಗದು ಅಭಿವೃದ್ಧಿಗೆ ಬಳಸಿಕೊಂಡರಷ್ಟೇ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

2006ರ 20 ತಿಂಗಳ ಅವಧಿಯಲ್ಲಿ 58 ರಸ್ತೆ ಅಗಲೀಕರಣ, ಮೆಟ್ರೋ ಮೊದಲ ಹಂತ ಕಾಮಗಾರಿಗೆ ಚಾಲನೆ, ಹೊಸ ಏರ್‌ʼಪೋರ್ಟ್‌ ರಸ್ತೆ, ನೆಲಮಂಗಲ ರಸ್ತೆ, ಎಲೆಕ್ಟ್ರಾನಿಕ್ ರಸ್ತೆ ಅಭಿವೃದ್ಧಿ ಸೇರಿ ಎಷ್ಟೋ ಕೆಲಸ ಮಾಡಿದ್ದೇನೆ. ಕೆರೆಯನ್ನೇ ನುಂಗಿ ಜೆಪಿ ನಗರ ಡಾಲರ್ಸ್‌ ಕಾಲೋನಿ ಮಾಡಿದ್ದರಲ್ಲ, ಆ ಮನೆಗಳಿಗೆ ಕೆರೆ ನೀರು ನುಗ್ಗುತ್ತಿದ್ದನ್ನು ತಪ್ಪಿಸಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.

ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ, ವೀರನೂ ಅಲ್ಲ. ಜನ ನಿಮಗೆ ಕುದುರೆ ಕೊಟ್ಟಿದ್ದಾರೆ. ಕುದುರೆ ಶೋಕಿಗಲ್ಲ. ಪೆನ್ನು ಅಲಂಕಾರಕ್ಕಲ್ಲ. ಇನ್ನಾದರೂ ಮಾತು ನಿಲ್ಲಿಸಿ ಕೆಲಸ ಮಾಡಿ. ಇಲ್ಲವಾದರೆ ನಿಮ್ಮ ಬ್ರ್ಯಾಂಡಿಗೆ ಜನ ಅದೇ ನೀರು ಬಿಟ್ಟಾರು ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

SCROLL FOR NEXT