ಹಾವೇರಿ: ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಕಾರುಗಳಲ್ಲಿ ರೋಡ್ ಶೋ ನಡೆಸಿ, ವಿಜಯೋತ್ಸವ ಆಚರಿಸಿದ್ದ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಏಳು ಆರೋಪಿಗಳಿಗೆ ಕೋರ್ಟ್ ಶನಿವಾರ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ.
ಜೈಲಿನಿಂದ ಗುರುವಾರ ರಾತ್ರಿ ಬಿಡುಗಡೆಯಾಗಿದ್ದ ಎಲ್ಲಾ ಏಳು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದ ಹಾನಗಲ್ ಠಾಣೆ ಪೊಲೀಸರು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳನ್ನು ಜೂನ್ 2 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ ಶ್ರೀವಾಸ್ತವ ಅವರು ಭಾನುವಾರ ತಿಳಿಸಿದ್ದಾರೆ.
"ನಾವು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ. ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ, ನಾವು ಅವರ ಜಾಮೀನು ರದ್ದತಿ ಕೋರಿ ಅರ್ಜಿ ಸಲ್ಲಿಸುತ್ತೇವೆ" ಎಂದು ಅಂಶು ಕುಮಾರ್ ಶ್ರೀವಾಸ್ತವ ಅವರು ಹೇಳಿದ್ದಾರೆ.
ಹಾವೇರಿ ಸಬ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳಾದ ಅಫ್ತಾದ್‌ಚಂದನ ಕಟ್ಟಿ, ಮದರ್‌ಸಾಬ್ ಮಂಡಕ್ಕಿ, ಸಮಿವುಲ್ಲ ಲಾಲನವರ್, ಮೊಹ್ಮದ್ ಸಾದಿಕ್ ಅಗಸಿನಿ, ಶೋಯಿಬ್ ಮುಲ್ಲ, ತೌಸಿಫ್‌ಚೋಟಿ ಮತ್ತು ರಿಯಾಜ್‌ಸೆವಿಕೇರಿ ಇವರುಗಳು ಕಾರುಗಳಲ್ಲಿ, ಬೈಕ್‌ಗಳಲ್ಲಿ ಕುಳಿತು ವಿಜಯೋತ್ಸವದ ರೀತಿಯಲ್ಲಿ ಮೆರವಣಿಗೆ ನಡೆಸಿರುವ ವೀಡಿಯೊಗಳು ವೈರಲ್ ಆಗಿದ್ದವು.
ಆರೋಪಿಗಳ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ವಿಜಯೋತ್ಸವ ನಡೆಸಿದ್ದ ಆರೋಪಿಗಳಿಗೆ ಶಾಕ್ ನೀಡಿದ್ದು, ಎಲ್ಲ 7 ಆರೋಪಿಗಳನ್ನು ಬಂಧಿಸಿ ಮತ್ತದೇ ಹಾವೇರಿ ಜೈಲಿಗೆ ಅಟ್ಟಿದ್ದಾರೆ.