ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದ್ದು, ಡೆಲಿವರಿ ಬಾಯ್ ಉದ್ಯಮಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರಿನ ಬಸವೇಶ್ವರನಗರದಲ್ಲಿ ಈ ಘಟನೆ ನಡೆದಿದ್ದು, ವಿಳಾಸ ತಪ್ಪಾಗಿದ್ದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗ್ರಾಹಕನ ಮೇಲೆ ಡೆಲಿವರಿ ಯುವಕ ಹಲ್ಲೆ ನಡೆಸಿದ್ದಾರೆ. ಇದೀಗ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆಲಿವರಿ ಯುವಕ ವಿಷ್ಣುವರ್ಧನ್ ವಿರುದ್ಧ ಗ್ರಾಹಕ ಶಶಾಂಕ್ ಅವರು ದೂರು ನೀಡಿದ್ದಾರೆ.
ಮೂಲಗಳ ಪ್ರಕಾರ ಮೇ 21ರಂದು ZEPTO ಆ್ಯಪ್‌ವೊಂದರಲ್ಲಿ ಶಶಾಂಕ್ ಅವರ ಪತ್ನಿ ಕೆಲ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ಬಂದಾಗ ಶಶಾಂಕ್ ಅವರ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಮನೆಯಿಂದ ಹೊರಕ್ಕೆ ಬಂದಿದ್ದರು.
ಆ ಸಂದರ್ಭದಲ್ಲಿ ವಿಳಾಸ ತಪ್ಪು ನೀಡಿದ್ದೀರಿ ಎಂದು ಡೆಲಿವರಿ ಯುವಕ ಪ್ರಶ್ನೆ ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಇದನ್ನು ಗಮನಿಸಿದ ಶಶಾಂಕ್ ಅವರು ಹೊರಗಡೆ ಬಂದು ಪ್ರಶ್ನೆ ಮಾಡಿ ಡೆಲಿವರಿ ಬಾಯ್ ಮೇಲೆ ಎಗರಾಡಿದ್ದಾರೆ.
ಆಗ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಘಟನೆ ಕುರಿತು ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಹಲ್ಲೆಯಿಂದ ಕಣ್ಣಿಗೆ ಗಾಯವಾಗಿದೆ ಎಂದು ಶಶಾಂಕ್ ಆರೋಪಿಸಿದ್ದಾರೆ.