ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಂದ ತಿರಸ್ಕರಿಸಲಾದ ಕರೆನ್ಸಿ ನೋಟುಗಳನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಭರವಸೆ ನೀಡಿ ನಿವೃತ್ತ ಬ್ಯಾಂಕ್ ಉದ್ಯೋಗಿಗೆ 15 ಲಕ್ಷ ರೂ. ವಂಚಿಸಿದ ಆರೋಪದ ಮೇಲೆ ಪೀಣ್ಯ ಪೊಲೀಸರು ಹೆಡ್ ಕಾನ್‌ಸ್ಟೆಬಲ್ ಮತ್ತು ಆತನ ಮೂವರು ಸಹಚರರನ್ನು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ನಾಗರಾಜ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದಾನೆ. ಕಿರಣ್ ಕುಮಾರ್, ಗಜೇಂದ್ರ ಮತ್ತು ಪ್ರಭು ಎಲ್ಲರೂ ಚಿತ್ರದುರ್ಗದ ನಿವಾಸಿಗಳು. ಪೊಲೀಸರ ಪ್ರಕಾರ, ನಿವೃತ್ತ ಬ್ಯಾಂಕ್ ಉದ್ಯೋಗಿ ರಾಧಾ ಕೃಷ್ಣ ನಾಯಕ್ ಈ ಹಿಂದೆ ಕಿರಣ್ ಕುಮಾರ್ ಅವರ ಸಹೋದರಿಯ ನೆರೆಹೊರೆಯವರಾಗಿದ್ದರು.
ತನ್ನ ಸಹೋದರಿಯ ಮನೆಗೆ ಭೇಟಿ ನೀಡಿದಾಗ, ಕುಮಾರ್ ನಾಯಕ್ ಜೊತೆ ಸ್ನೇಹ ಬೆಳೆಸಿದರು. ತನ್ನ ಬಳಿ 50 ಲಕ್ಷ ರೂ. ಮೌಲ್ಯದ ತಿರಸ್ಕರಿಸಲಾದ ಆರ್‌ಬಿಐ ಕರೆನ್ಸಿ ನೋಟುಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದ. 10 ಲಕ್ಷ ರೂ. ಈ ನೋಟುಗಳಿಗೆ ಬದಲಾಗಿ ಮಾನ್ಯವಾಗಿರುವ 5 ಲಕ್ಷ ರು ಹಣ ನೀಡುವಂತೆ ನಾಯಕ್ ಗೆ ಕಿರಣ್ ಕುಮಾರ್ ತಿಳಿಸಿದ್ದ, ಅದನ್ನು ನಂಬಿದ್ದ ನಾಯಕ್ ಹಂತ ಹಂತವಾಗಿ ಆತನಿಗೆ ಹಣ ನೀಡಿದರು.
ಬದಲಿಗೆ ನೋಟುಗಳನ್ನು ತಲುಪಿಸದಿದ್ದಾಗ, ನಾಯಕ್ ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದರು. ಪೊಲೀಸರು ಕ್ರಮ ಕೈಗೊಳ್ಳುತ್ತಾರೆಂಬ ಭಯದಿಂದ, ಈ ಗ್ಯಾಂಗ್ ನಾಗರಾಜ್ ಸಹಾಯವನ್ನು ಕೋರಿತು, ಆಗ ನಾಗರಾಜ್ ಕುಮಾರ ನನ್ನು ಹಿರಿಯೂರು ಪೊಲೀಸರು ಅಕ್ರಮ ಕರೆನ್ಸಿ ಸಾಗಿಸಿದ್ದಕ್ಕಾಗಿ ಬಂಧಿಸಿದ್ದಾರೆ ಎಂದು ನಾಯಕ್ ಗೆ ಸುಳ್ಳು ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯಲ್ಲಿ ಅವರ ಬಳಿ ಅಂತಹ ಯಾವುದೇ ತಿರಸ್ಕೃತ ಕರೆನ್ಸಿ ಇರಲಿಲ್ಲ ಮತ್ತು ಅವರು ನಾಯಕ್ ಗೆ ಸುಳ್ಳು ಹೇಳಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.