ಮಂಡ್ಯ: ಆಟವಾಡಲು ಹೋಗಿ ಕಾಲು ಜಾರಿ ಬಿದ್ದ ಬಾಲಕಿ ರಕ್ಷಣೆಗೆ ಹೋದ ನಾಲ್ವರು ಮಕ್ಕಳು ನೀರುಪಾಲಾದ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಬಾಲಕಿಯರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.
ನೀರಿನಲ್ಲಿ ಮುಳುಗಿದ್ದ ಓರ್ವ ಬಾಲಕಿಯನ್ನು ನಿನ್ನೆಯೇ ರಕ್ಷಣೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಲಕಿ ಆಯಿಷಾ (14) ಮೃತಪಟ್ಟಿದ್ದಾಳೆ. ಇಂದು ಆಫ್ರಿನ್ (13) ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿರುವ ಹನಿ (14), ಥರ್ಬಿಮ್ (13)ಗಾಗಿ ಹುಡುಕಾಟ ನಡೆದಿದೆ. ಮಕ್ಕಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಶಾಂತಿನಗರದ ಮದರಸದ ಮಕ್ಕಳನ್ನು ಪಿಕ್‌ನಿಕ್‌ಗೆ ಎಂದು ಕರೆದುಕೊಂಡು ಬರಲಾಗಿತ್ತು. ನಿನ್ನೆ ಸಂಜೆ 5.30ರ ಸಮಯಕ್ಕೆ ನಾಲೆ ಬಳಿ ಆಟವಾಡುವಾಗ ಮಕ್ಕಳು ನಾಲೆಗೆ ಇಳಿದಿದ್ದರು. ಆದರೆ ನೋಡು ನೋಡುತ್ತಿದ್ದಂತೆ ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದರು. ಇದರಲ್ಲಿ ಬಾಲಕಿ ಆಯಿಷಾಳನ್ನ ಕಾಪಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ. ಇನ್ನು ಹನಿ, ಅಫ್ರಿನ್ ಹಾಗೂ ತರ್ವೀನ್ ನಾಪತ್ತೆ ಆಗಿದ್ದರು. ಈ ಸಂಬಂಧ ನಿನ್ನೆಯಿಂದಲೇ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ರಾತ್ರಿಆಗಿದ್ದರಿಂದ ನಿನ್ನೆ ಶೋಧ ಕಾರ್ಯ ಸ್ಥಗಿತ ಮಾಡಲಾಗಿತ್ತು. ಇಂದು ಶೋಧ ಕಾರ್ಯ ಮುಂದುವರೆಯಲಿದೆ. ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.