ಚಿತ್ರದುರ್ಗದ ರೇಣುಕಸ್ವಾಮಿ ಅಪಹರಣ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 64ನೇ ಸೆಷನ್ಸ್ ನ್ಯಾಯಾಲಯ ಇಂದು ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರ 15 ಜನರ ವಿರುದ್ಧ ಕೊಲೆ, ಕ್ರಿಮಿನಲ್ ಪಿತೂರಿ, ಅಪಹರಣ ಮತ್ತು ಕಾನೂನುಬಾಹಿರ ಸಭೆ ಆರೋಪಗಳನ್ನು ಹೊರಿಸಿದೆ. ಆದರೆ ಎಲ್ಲಾ 17 ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಹೀಗಾಗಿ ಕೋರ್ಟ್ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಲ್ಲಾ ಆರೋಪಿಗಳನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಯಿತು. ಕೋರ್ಟ್ ಹಾಲ್ನಲ್ಲಿ ಅನೇಕ ವಕೀಲರು ಹಾಗೂ ಜನ ಕಿಕ್ಕಿರಿದಿದ್ದರು. ಹೀಗಾಗಿ ನ್ಯಾಯಾಧೀಶ ಐಪಿ ನಾಯಕ್ ಅವರು, ಪ್ರಕರಣಕ್ಕೆ ಸಂಬಂಧ ಇರದ ಎಲ್ಲರೂ ಹೊರಗೆ ಹೋಗುವಂತೆ ಸೂಚಿಸಿದರು. ದೋಷಾರೋಪ ಪ್ರಕಾರ, ಪವಿತ್ರ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದರೆ, ದರ್ಶನ್ ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿಸಿ ಖಾಸಗಿ ಭಾಗಕ್ಕೆ ಒದ್ದಿದ್ದು ಗಂಭೀರ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಎರಡು ಆನೆಗಳು ಸಾವಿಗೀಡಾಗಿರುವ ಘಟನೆಯ ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿಯ ಸುಲೈಗಲಿ ಗ್ರಾಮದಲ್ಲಿ ನಿನ್ನೆ ಈ ಘಟನೆ ಸಂಭವಿಸಿದ್ದು ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಆನೆಗಳು ಇದ್ದರೂ, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಸಹ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಐದು ದಿನಗಳಲ್ಲಿ ವಿವರವಾದ ವರದಿ ಹಾಗೂ ಯಾವುದೇ ಲೋಪಗಳು ಕಂಡುಬಂದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವಂತೆ ಸಚಿವರು ಮುಖ್ಯ ವನ್ಯಜೀವಿ ವಾರ್ಡನ್‌ಗೆ ನಿರ್ದೇಶಿಸಿದ್ದಾರೆ. ಈಮಧ್ಯೆ, ಚಿಕ್ಕಮಗಳೂರಿನಲ್ಲಿ ಇಬ್ಬರು ಜನರನ್ನು ತುಳಿದು ಕೊಂದ 40 ವರ್ಷದ ಆನೆಯನ್ನು ಸುದೀರ್ಘ 17 ಗಂಟೆಗಳ ಕಾರ್ಯಾಚರಣೆಯ ನಂತರ ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ಕಸ ಸುರಿಯುವವರ ಮನೆಯ ಮುಂದೆ ಕಸ ಸುರಿದು ದಂಡ ವಸೂಲಿ ಮಾಡುತ್ತಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಅಧಿಕಾರಿಗಳು, ಕಸದ ಸಮಸ್ಯೆಗೆ ದೂರಾಗಿಸಲು ಮತ್ತೊಂದು ಮಾಸ್ಟರ್ ಪ್ಲ್ಯಾನ್ ರೂಪಿಸಿದೆದ್ದಾರೆ. ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಕಸ ಎಸೆದು ಹಾಕುವವರಿಗೆ ಕಡಿವಾಣ ಹಾಕುವ ಸಲುವಾಗಿ, ಕಸ ಎಸೆಯುವವರ ವಿಡಿಯೋಗಳನ್ನು ನೀಡಿದವರಿಗೆ 250 ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. BSWML ವ್ಯವಸ್ಥಾಪಕ ನಿರ್ದೇಶಕ ಕರೀಗೌಡ ಮಾತನಾಡಿ, ಮುಂದಿನ 30 ರಿಂದ 40 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನಗರದ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯವನ್ನು ಪುನರಚಿಸುವ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದಿಂದ ಸ್ಪಷ್ಟ ಸೂಚನೆಗಳು ಬಂದಿವೆ ಎಂದು ಹೇಳಿದರು.
ನಮ್ಮ ಮೆಟ್ರೋದ ಪಿಂಕ್ ಲೈನ್ 2026ರ ಮೇನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಗುಲಾಬಿ ಮಾರ್ಗದ ಸಂಚಾರ ಮುಂದಿನ ವರ್ಷ ಮೇ ತಿಂಗಳಲ್ಲಿ ಆರಂಭವಾಗಲಿದೆ. ಕಾಳೇನ ಅಗ್ರಹಾರ- ನಾಗವಾರ ನಡುವಿನ ಗುಲಾಬಿ ಮಾರ್ಗವು 21 ಕಿಮೀ ಉದ್ದವಿದೆ. ಇದರಲ್ಲಿ 13.76 ಕಿ.ಮೀ. ಭೂಗತ ಮಾರ್ಗವನ್ನು ಹೊಂದಿದ್ದು, ಸಂಚಾರ ಸುಗಮವಾಗಲಿದೆ ಎಂದಿದ್ದಾರೆ. ಉತ್ತಮ ಸಂಪರ್ಕಕ್ಕೆ ನಮ್ಮ ಬದ್ಧತೆ ಮುಂದುವರಿಯುತ್ತದೆ. ಈ ರೈಲು ಬೆಂಗಳೂರು ದಕ್ಷಿಣದಿಂದ ಉತ್ತರಕ್ಕೆ ಸಂಪರ್ಕ ಕಲ್ಪಿಸುತ್ತದೆ' ಎಂದು ಡಿಕೆ ಶಿವಕುಮಾರ್ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂಬ ಬಿಹಾರ ಮುಖಂಡರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಡಾಮಂಡಲಗೊಂಡಿದ್ದು, ಕಾಂಗ್ರೆಸ್ ಹೈ ಕಮಾಂಡ್ ಈ ಬಗ್ಗೆ ಏನಾದ್ರು ಹೇಳಿದೆಯೇನ್ರಿ? ಎಂದು ಕಿಡಿಕಾರಿದ್ದಾರೆ. ಮೈಸೂರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಬಿಹಾರ ಮುಖಂಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಯಾರು ಏನೇ ಹೇಳಿದ್ರೂ ಅದು ಮುಖ್ಯವಲ್ಲ. ಕಾಂಗ್ರೆಸ್ ಹೈಕಮಾಂಡ್ ಹೇಳುವುದಷ್ಟೇ ಮುಖ್ಯ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏನಾದ್ರೂ ಹೇಳಿದ್ಯಾ? ಯಾಕೆ ಪದೇ ಪದೇ ಅದನ್ನೇ ಮಾತನಾಡುತ್ತೀರಾ. ಜನ ಮಾತನಾಡುತ್ತಿಲ್ಲ, ಮಾಧ್ಯಮದವರೇ ಪದೇ ಪದೇ ಮಾತನಾಡುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು. ಬಿಹಾರ ಚುನಾವಣೆ ಮುಗಿದ ನಂತರ ಪುನರ್ರಚನೆಗೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸುವ ಸಾಧ್ಯತೆಯಿದೆ ಎಂದು ಸಿಎಂ ಹೇಳಿದರು.