ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ಕಸ ಸುರಿಯುವವರ ಮನೆಯ ಮುಂದೆ ಕಸ ಸುರಿದು ದಂಡ ವಸೂಲಿ ಮಾಡುತ್ತಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್) ಅಧಿಕಾರಿಗಳು, ಕಸದ ಸಮಸ್ಯೆಗೆ ದೂರಾಗಿಸಲು ಮತ್ತೊಂದು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರಿಗೆ ಕಡಿವಾಣ ಹಾಕುವ ಸಲುವಾಗಿ, ಕಸ ಎಸೆಯುವವರ ವಿಡಿಯೋಗಳನ್ನು ನೀಡಿದವರಿಗೆ ರೂ.250 ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ಬಿಎಸ್‌ಡಬ್ಲ್ಯೂಎಂಎಲ್‌ನ ಮೀಸಲಾದ ವಾಟ್ಸಾಪ್ ಸಂಖ್ಯೆ - 9448197197 ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವವರಿಗೆ ರೂ.250 ಬಹುಮಾನ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್‌ಡಬ್ಲ್ಯೂಎಂಎಲ್ ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ ಅವರು ಮಾತನಾಡಿ, ಮುಂದಿನ 30 ರಿಂದ 40 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನಗರದ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯವನ್ನು ಪುನರ್ರಚಿಸುವಾಗ, ಈ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಮತ್ತು ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದಿಂದ ಸ್ಪಷ್ಟ ಸೂಚನೆಗಳು ಬಂದಿವೆ ಎಂದು ಹೇಳಿದ್ದಾರೆ.
ವಿಡಿಯೋಗಳನ್ನು ಹಂಚಿಕೊಳ್ಳುವ ಜನರು ಸಾಧ್ಯವಾದರೆ ನಿಯಮ ಉಲ್ಲಂಘಿಸಿದವರ ವಿವರಗಳನ್ನೂ ಹಂಚಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಂಸ್ಥೆಯು ಈ ವರೆಗೂ 800ಕ್ಕೂ ಹೆಚ್ಚು ಬ್ಲಾಕ್‌ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಿದೆ. ಸಾಕಷ್ಟು ಜಾಗೃತಿ, ಅಭಿಯಾನದ ಬಳಿಕವೂ ಜನರು ಈಗಲೂ ರಸ್ತೆ ಬದಿಗಳಲ್ಲಿ ಕಸಗಳನ್ನು ಎಸೆದು ಹೋಗುತ್ತಿದ್ದಾರೆ. ಈಗಲೂ ಇದನ್ನು ನಾವು ನೋಡುತ್ತಿದ್ದೇವೆ. ಮನೆ ಬಾಗಿಲಿಗೇ ಆಟೋ ಟಿಪ್ಪರ್ ಗಳು ಬಂದರೂ ಕಸ ಹಾಕಲು ಸೋಮಾರಿಗಳಾಗಿದ್ದಾರೆ. ಹೀಗಾಗಿ ವಿಡಿಯೋ ಹಂಚಿಕೊಳ್ಳುವವರಿಗೆ ಯುಪಿಐ ಖಾತೆ ಮೂಲಕ ಬಹುಮಾನದ ಹಣ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಮಾಹಿತಿ ನೀಡಿದವರ ಮಾಹಿತಿಯನ್ನು ರಹಸ್ಯವಾಗಿಡಲಾಗುವುದು ಎಂದು GBA ಯ ಐಟಿ ತಂಡದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯೋಜನೆಯಿಂದ ಜಿಬಿಎ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಕುರಿತ ಪ್ರಶ್ನೆಗೆ ಉತ್ತರಿಸಿ, ಜಿಬಿಎ ನಷ್ಟವನ್ನು ಅನುಭವಿಸುವುದಿಲ್ಲ. ಬಹುಮಾನದ ಹಣವನ್ನು ಜನರಿಂದಲೇ ಸಂಗ್ರಹಿಸಿದ ದಂಡದ ಮೊತ್ತದಿಂದಲೇ ಪಾವತಿಸಲಾಗುವುದು. ಬೇಜವಾಬ್ದಾರಿಯಿಂದ ಎಸೆಯುವ ತ್ಯಾಜ್ಯದ ಪ್ರಮಾಣ ಮತ್ತು ಪ್ರಕಾರವನ್ನು ಅವಲಂಬಿಸಿ 1,000 ರಿಂದ 10,000 ರೂ.ಗಳನ್ನು ಸಂಗ್ರಹಿಸುತ್ತಿದ್ದೇವೆ. 250 ರೂ.ಗಳನ್ನು ಬಹುಮಾನವಾಗಿ ನೀಡುವುದು ನಷ್ಟವಲ್ಲ. ಇದು ನಗರವನ್ನು ಸ್ವಚ್ಛವಾಗಿಡಲು ಜನರನ್ನು ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದ್ದಾರೆ.