ಬೆಂಗಳೂರು: ಆರ್‌ಎಸ್‌ಎಸ್ ಹಾಗೂ ರಾಜ್ಯ ಸರ್ಕಾರದ ಮಧ್ಯೆ ನಡೆಯುತ್ತಿರುವ ಜಟಾಪಟಿ ವಿಚಾರದಲ್ಲಿ ಉದ್ವೇಗದ ಹೇಳಿಕೆ ನೀಡಬೇಡಿ. ಪಥಸಂಚಲನ ವಿಚಾರಕ್ಕೂ ಪ್ರತಿಕ್ರಿಯಿಸಬೇಡಿ ಎಂದು ಸಂಘದ ಪ್ರಮುಖರು ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ.
RSS ವಿರೋಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ಹೇಳಿಕೆಗಳಿಗೆ ಪ್ರತ್ಯುತ್ತರಿಸುವ ಭರದಲ್ಲಿ ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಬಿಜೆಪಿ ನಾಯಕರಿಗೆ ಸೂಚಿಸಿದೆ.
ರಾಜ್ಯದಲ್ಲಿ ಆರೆಸ್ಸೆಸ್ ಪಥ ಸಂಚಲನದ ಹಿನ್ನೆಲೆಯಲ್ಲಿ ಎದ್ದಿರುವ ವಿವಾದ ಪಥ ಸಂಚಲನಕ್ಕೆ ಅನುಮತಿ ನೀಡದಿರುವುದು ಹಾಗೂ ಕಾನೂನು ಸಮರದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನಾಯಕರ ಜೊತೆ ಆರ್‌ಎಸ್‌ಎಸ್ ಮಹತ್ವದ ಬೈಠಕ್ ನಡೆಸಿತು.
ಮಧ್ಯಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಸೇರಿದಂತೆ ಸಂಘದ ಪ್ರಮುಖರು ಹಾಗೂ ಬಿಜೆಪಿ ನಾಯಕರು ಭಾಗವಹಿಸಿದ್ದ ಚಿಂತನಾ ಸಭೆಯಲ್ಲಿ ಸೋಮವಾರ ಈ ಸೂಚನೆ ನೀಡಲಾಗಿದ್ದು, ಸಂಘ, ಸಿದ್ಧಾಂತ, ರಾಜಕೀಯ ಹೋರಾಟಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ಧ್ವನಿ ಒಂದೇ ಆಗಿರಲಿ. ಹತ್ತು ಜನರಿಂದ ಹತ್ತು ಅಭಿಪ್ರಾಯ ಹೊಮ್ಮಿದರೆ ಇನ್ನಷ್ಟು ಗೊಂದಲ ಸೃಷ್ಟಿಯಾಗುತ್ತದೆ ಎಂದು ಸೂಚನೆ ನೀಡಲಾಗಿದೆ.
ಶತಾಬ್ದಿ ವರ್ಷದಲ್ಲಿರುವ ಸಂಘ ಇದುವರೆಗೆ ಹಲವು ಸವಾಲುಗಳನ್ನು ಎದುರಿಸಿದೆ. ಎರಡು ಬಾರಿ ನಿಷೇಧಕ್ಕೆ ಒಳಗಾಗಿದ್ದರೂ ಮತ್ತೆ ಜನಮಾನಸದಲ್ಲಿ ಸ್ಥಾನಪಡೆದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಎದುರಾಗುವ ಸಂದಿಗ್ಧತೆಗಳನ್ನು ಅದು ಎದುರಿಸುತ್ತದೆ. ಇದರಲ್ಲಿ ಪಕ್ಷವಾಗಿ ಉದ್ವೇಗದ ಹೇಳಿಕೆ ನೀಡುವುದು ಬೇಡ. ಪಥಸಂಚಲನ ವಿವಾದಕ್ಕೆ ಸಂಬಂಧಪಟ್ಟಂತೆಯೂ ಹೇಳಿಕೆ ನೀಡುವುದು ಬೇಡ ಎಂಬ ನಿರ್ದೇಶನವನ್ನು ನೀಡಲಾಗಿದೆ.
ಆರ್‌ಎಸ್‌ಎಸ್ ವಿರುದ್ಧದ ಷಡ್ಯಂತ್ರ ಎದುರಿಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು. ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಬಯಲಿಗೆಳೆದು ಕಾಂಗ್ರೆಸ್ ನಾಯಕರ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು. ಕಾಂಗ್ರೆಸ್ ವಿರುದ್ಧ ಪರಿಣಾಮಕಾರಿ ಹೋರಾಟ ರೂಪಿಸುವುದು ಬೈಠಕ್‌ನ ನಿರ್ಣಯಗಳಾಗಿವೆ.