ಬೆಂಗಳೂರು: ‘ಲಾಸ್ ಏಂಜಲೀಸ್ 2028’ (LA 2028) ಅನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಒಲಿಂಪಿಕ್ ಪದಕ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯಡಿ 60 ಕ್ರೀಡಾಪಟುಗಳನ್ನು ಗುರುತಿಸಲಾಗುತ್ತಿದ್ದು, ಪ್ರತೀ ಕ್ರೀಡಾಪಟುವಿಗೆ ಮೂರು ವರ್ಷಗಳವರೆಗೆ ಪ್ರತಿ ವರ್ಷ 10 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ 6 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಕ್ರೀಡಾಪಟುಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಕ್ರೀಡಾ ಮತ್ತು ಯುವಜನ ಸೇವೆಗಳ ಇಲಾಖೆಯು ಮುಂದಿನ ವಾರ ಅರ್ಜಿಗಳನ್ನು ಆಹ್ವಾನಿಸಲಿದೆ ಎಂದು ತಿಳಿದುಬಂದಿದೆ.
ಇಲಾಖೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತದೆ. ವಿಶ್ವ ಅಥವಾ ಏಷ್ಯನ್ ಚಾಂಪಿಯನ್‌ಶಿಪ್‌ಗಳು, ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರು ಅರ್ಜಿ ಸಲ್ಲಿಸಬಹುದು. ಸೀನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಪದಕಗಳನ್ನು ಗೆದ್ದವರು ಸಹ ಅರ್ಜಿ ಸಲ್ಲಿಸಬಹುದು.
ಗುಂಪು ಆಟದ ವಿಭಾಗದ ಅಡಿಯಲ್ಲಿ, ರಾಷ್ಟ್ರೀಯ ಶಿಬಿರಗಳಲ್ಲಿ ಭಾಗವಹಿಸಿದ ಅಥವಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸತತ ಮೂರು ವರ್ಷಗಳ ಕಾಲ ಕರ್ನಾಟಕವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇಲಾಖೆ ಸಮಿತಿಗಳನ್ನು ರಚಿಸಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕ್ರೀಡಾಪಟುಗಳ ಕಾರ್ಯಕ್ಷಮತೆಯ ಆಧಾರದ ಮೇಲೆ, ಎರಡನೇ ಮತ್ತು ಮೂರನೇ ವರ್ಷಕ್ಕೆ ಅವರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಹಣವನ್ನು ತರಬೇತಿ, ಉಪಕರಣಗಳು ಮತ್ತು ಪೌಷ್ಠಿಕಾಂಶ ಪೂರಕಗಳನ್ನು ಖರೀದಿಸಲು ಮತ್ತು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಬಳಸಬಹುದಾಗಿದೆ ಎಂದು ತಿಳಿಸಲಾಗಿದೆ.