ಬೆಂಗಳೂರು: ಕಳ್ಳತನದ ಆರೋಪದ ಮೇಲೆ ಪೊಲೀಸ್ ಠಾಣೆಯೊಳಗೆ 34 ವರ್ಷದ ಮನೆಕೆಲಸದಾಕೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ವರ್ತೂರು ಪೊಲೀಸ್ ಠಾಣೆಗೆ ಸೇರಿದ ಸಂಜಯ್ ರಾಥೋಡ್, ಸಂತೋಷ್ ಕುದರಿ ಮತ್ತು ಅರ್ಚನಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾರತ್ ಹಳ್ಳಿಯ ಸಹಾಯಕ ಪೊಲೀಸ್ ಆಯುಕ್ತೆ ಪ್ರಿಯದರ್ಶಿನಿ ಮಂಗಳವಾರ ಸಲ್ಲಿಸಿದ ತನಿಖಾ ವರದಿಯ ಆಧಾರದ ಮೇಲೆ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 30 ರಂದು ಮಹಿಳೆಯೊಬ್ಬರು ತಮ್ಮ ಮನೆಕೆಲಸದಾಕೆ ಪಶ್ಚಿಮ ಬಂಗಾಳ ಮೂಲದ ಸುಂದರಿ ಬೀಬಿ ವಜ್ರದ ಉಂಗುರವನ್ನು ಕದ್ದಿದ್ದಾರೆ ಎಂದು ಆರೋಪಿಸಿ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ನಂತರ ಪೊಲೀಸರು ಎನ್ ಸಿಆರ್(ಗಂಭೀರವಲ್ಲದ ಪ್ರಕರಣ )ದಾಖಲಿಸಿದ್ದರು.
ತದನಂತರ ಕಳೆದ ಮೂರು ತಿಂಗಳಿನಿಂದ ಟೆಕ್ಕಿ ದಂಪತಿಗಳ ಬಳಿ ಕೆಲಸ ಮಾಡುತ್ತಿದ್ದ ಬೀಬಿಯನ್ನು ಪೊಲೀಸ್ ಠಾಣೆಗೆ ಕರೆಸಲಾಗಿದೆ. ಅವರು ತಮ್ಮ ಪತಿಯೊಂದಿಗೆ ಠಾಣೆಗೆ ಹೋದಾಗ ಮೊದಲ ಮಹಡಿಯಲ್ಲಿ ಪೊಲೀಸ್ ಸಿಬ್ಬಂದಿ ಅವರನ್ನು ಬಂಧಿಸಿ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮಧ್ಯಪ್ರವೇಶಿಸಿ ಪೊಲೀಸರಿಂದ ವಿವರಣೆ ಕೇಳಿದ ನಂತರವೇ ಮಹಿಳೆಯನ್ನು ಬಿಡುಗಡೆ ಮಾಡಲಾಗಿದೆ. ನಂತರ ಮನೆ ಕೆಲಸದಾಕೆಯನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ವೈದ್ಯಕೀಯ-ಕಾನೂನು ಪ್ರಕರಣ (MLC) ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.