ಬೆಳಗಾವಿ: ಬೈಲಹೊಂಗಲದ ನಿವಾಸಿಯೊಬ್ಬರು ಆನ್‌ಲೈನ್ ಹೂಡಿಕೆ ವಂಚನೆಗೆ ಬಲಿಯಾಗಿದ್ದು, 9,23,948 ರೂ.ಗಳನ್ನು ಕಳೆದುಕೊಂಡಿದ್ದಾರೆ.
ಬೈಲಹೊಂಗಲದ ನಿವಾಸಿ ಪ್ರವೀಣ್ ಅನಂತ್ ರೇಣಿಕೆ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ‘ಓರಿಯೊನೆಕ್ಸ್ ಮಾರ್ಕೆಟ್ಸ್’ ಎಂಬ ನಕಲಿ ಕಂಪನಿಯ ಮೂಲಕ ಹೆಚ್ಚಿನ ಲಾಭದ ಭರವಸೆ ನೀಡಿ ವಂಚಿಸಲಾಗಿದ್ದು, ಈ ಸಂಬಂಧ ಬೆಳಗಾವಿಯ ಜಿಲ್ಲಾ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಕ್ಟೋಬರ್ 13 ರಂದು, ಪ್ರವೀಣ್ ಅನಂತ್ ರೇಣಿಕೆ ಅವರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ, ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಬಂದಿದೆ.
ಸಂದೇಶದಲ್ಲಿ ಚಿನ್ನದ ಬೆಲೆ ವೇಗವಾಗಿ ಏರುತ್ತಿದೆ ಮತ್ತು ಓರಿಯೊನೆಕ್ಸ್ ಮಾರ್ಕೆಟ್ಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಗಣನೀಯ ಲಾಭ ಗಳಿಸಬಹುದು ಎಂದು ತಿಳಿಸಲಾಗಿದೆ ಇದನ್ನು ನಂಬಿದ ಅನಂತ್ ಅವರು, ಸಂಸ್ಥೆಯ ಅಧಿಕೃತ ವೆಬ್‌ಸೈಟ್ ನಂತೆ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ, ವೈಯಕ್ತಿಕ ವಿವರಗಳನ್ನು ನಮೂದಿಸಿದ್ದಾರೆ.
ನಕಲಿ ವೇದಿಕೆಯಲ್ಲಿ ಖಾತೆ ತೆರೆದ ಬಳಿಕ, ಖಾತೆಯಿಂದ ಹಿಂದೆ ಹೋಗಲು ಯತ್ನಿಸಿದ್ದಾರೆ. ಬಳಿಕ ಬ್ಯಾಂಕ್ ಖಾತೆಯಿಂದ ಹಣವನ್ನು ಲಪಟಾಯಿಸಿ ವಂಚನೆ ಮಾಡಲಾಗಿದೆ. ಬಳಿಕ ಮೋಸ ಹೋಗಿರುವುದಾಗಿ ತಿಳಿದ ಪ್ರವೀಣ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.