ಬೆಂಗಳೂರು: ಬೆಂಗಳೂರು ಉತ್ತರ ವಿಭಾಗದಲ್ಲಿ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಣೆ ಹಾಗೂ ಕಡಿಮೆ ವಿಸ್ತೀರ್ಣ ಘೋಷಣೆ ನೀಡಿರುವ ಆಸ್ತಿಗಳನ್ನು ಗುರುತಿಸಿ ನೋಟಿಸ್ ಜಾರಿ ಮಾಡುವ ಮೂಲಕ ಬಾಕಿ ಮೊತ್ತವನ್ನು ವಸೂಲಾತಿ ಮಾಡಲು 'ಟ್ಯಾಕ್ಸ್ ಡ್ರೈವ್' (ತೆರಿಗೆ ಅಭಿಯಾನ) ಆರಂಭಿಸಲಾಗಿದೆ ಎಂದು ಬೆಂಗಳೂರು ಉತ್ತರ ನಗರ ನಿಗಮದ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 4,57,951 ಆಸ್ತಿಗಳಿದ್ದು, ಅದರಲ್ಲಿ ವಸತಿ ಆಸ್ತಿಗಳು 3,36,989, ವಸತಿಯೇತರ ಆಸ್ತಿಗಳು 15,949, ವಸತಿ ಮತ್ತು ವಸತಿಯೇತರ ಆಸ್ತಿಗಳು 23,214 ಹಾಗೂ 81,799 ಖಾಲಿ ನಿವೇಶನಗಳು ಇವೆ ಎಂದು ಮಾಹಿತಿ ನೀಡಿದ್ದಾರೆ.
"ಈ ಎಲ್ಲಾ ಆಸ್ತಿಗಳು ನಗರ ಪಾಲಿಕೆ ತೆರಿಗೆ ವ್ಯಾಪ್ತಿಗೆ ಬರುತ್ತವೆ. ಪ್ರಸ್ತುತ ಹಣಕಾಸು ವರ್ಷದಲ್ಲಿ, ನಿಗಮವು ಆಸ್ತಿ ತೆರಿಗೆ ಸಂಗ್ರಹದಲ್ಲಿ 1,242 ಕೋಟಿ ರೂ.ಗಳ ಗುರಿ ಹೊಂದಿದೆ. ಇಲ್ಲಿಯವರೆಗೆ, 548 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ, ಇನ್ನೂ 694 ಕೋಟಿ ರೂ.ಗಳು ಬಾಕಿ ಉಳಿದಿದೆ ಎಂದು ಅವರು ಹೇಳಿದರು.
ಪ್ರಮುಖ ತೆರಿಗೆ ಸುಸ್ತಿದಾರರಿಗೆ ನೋಟಿಸ್ ನೀಡಲಾಗುತ್ತಿದೆ, ಬಾಕಿ ಇರುವ ತೆರಿಗೆ ಮೊತ್ತವನ್ನು ಆದಷ್ಟು ಬೇಗ ವಸೂಲಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕುಮಾರ್ ಹೇಳಿದರು.
ಪ್ರಸ್ತುತ ತೆರಿಗೆ ವ್ಯಾಪ್ತಿ ಹೊರಗಿನ ಆಸ್ತಿಗಳನ್ನು ಗುರುತಿಸಲು ಮತ್ತು ಅವುಗಳನ್ನು ಮೌಲ್ಯಮಾಪನದ ಅಡಿಯಲ್ಲಿ ತರಲು ಕ್ರಮ ಪ್ರಾರಂಭಿಸಲಾಗಿದೆ. ಈ ಉದ್ದೇಶಕ್ಕಾಗಿ, ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ವಸೂಲಿ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ವಲಯ ಮಟ್ಟದಲ್ಲಿ ಆಸ್ತಿ ತೆರಿಗೆ ವಸೂಲಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ ಎಂದು ಹೇಳಿದ್ದಾರೆ.
ಒಟ್ಟು 1,697 ಆಸ್ತಿಗಳಿಗೆ ಮೌಲ್ಯಮಾಪನ ಪರಿಷ್ಕರಣೆ ಅಗತ್ಯವಿದೆ ಮತ್ತು 78,565 ಆಸ್ತಿಗಳು ಬಾಕಿ ತೆರಿಗೆ ಬಾಕಿ ಉಳಿಸಿಕೊಂಡಿವೆ ಎಂದು ಮಾಹಿತಿ ನೀಡಿದ್ದಾರೆ. ಸುಸ್ತಿದಾರರಿಗೆ ಸೂಚನೆಗಳನ್ನು ನೀಡಲಾಗಿದೆ. ಆದರೂ ಸಹ ತೆರಿಗೆ ಪಾವತಿಸಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಆಸ್ತಿಗಳಿಗೆ ಬೀಗಮುದ್ರೆ ಹಾಕುವ ಕ್ರಮವನ್ನು ಸೂಚಿಸಲಾಗುವುದು.
ಕಂಠೀರವ ಕ್ರೀಡಾಂಗಣದಲ್ಲಿ ಮಳೆನೀರು ಚರಂಡಿ ಕೆಲಸವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಗಾಲದಲ್ಲಿ ಕಂಠೀರವ ಕ್ರೀಡಾಂಗಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲುತ್ತದೆ ಎಂದು ಅವರು ಹೇಳಿದರು. ಇದನ್ನು ತಡೆಗಟ್ಟಲು, ಮಳೆನೀರು ಚರಂಡಿಯ ಎತ್ತರವನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ.