ಬೆಂಗಳೂರು: ರಾಜ್ಯವನ್ನು ಜಾಗತಿಕ ನಾವೀನ್ಯತೆ ಕೇಂದ್ರವನ್ನಾಗಿಸುವ ಗುರಿಯೊಂದಿಗೆ ಐದು ವರ್ಷಗಳಲ್ಲಿ ಒಟ್ಟು ರೂ. 518. 27 ಕೋಟಿ ವೆಚ್ಚದ ಕರ್ನಾಟಕ ನಾವೀನ್ಯತೆ ನೀತಿ 2025 -2030ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್, 25,000 ಹೆಚ್ಚುವರಿ ನವೋದ್ಯಮಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅವುಗಳಲ್ಲಿ 10,000 ಸ್ಟಾರ್ಟ್ ಅಪ್ ಗಳನ್ನು ಬೆಂಗಳೂರಿನ ಹೊರಗೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಸುಸ್ಥಿರ ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಗೆ ಅಗತ್ಯವಾದ ಸಂಪನ್ಮೂಲಗಳು, ಮಾರ್ಗದರ್ಶನ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ರಾಜ್ಯವನ್ನು ಜಾಗತಿಕ ನಾವೀನ್ಯತೆ ಕೇಂದ್ರವನ್ನಾಗಿಸಲು ಪೂರಕ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ನೀತಿಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ವ್ಯಕ್ತಿ ಬಂಧನಕ್ಕೆ ಸಂಬಂಧಿಸಿದ ಮಾಹಿತಿಯ ದಾಖಲೆ ನಿರ್ವಹಣೆ ನಿಯಮಗಳು, 2025, ಕರ್ನಾಟಕ ಪೊಲೀಸ್ ಅಧಿಕಾರಿಯಿಂದ ಅಂತಿಮ ನಮೂನೆ ಸಲ್ಲಿಕೆ ನಿಯಮಗಳು, 2025 ಮತ್ತು ಕರ್ನಾಟಕ ನಮೂನೆ ಮತ್ತು ಮಾಹಿತಿ ವಿಧಾನ ನಿಯಮಗಳೆಂಬ ಪ್ರಮುಖ ಮೂರು ನಿಯಮಗಳಿಗೆ ಸಂಪುಟದ ಅನುಮೋದನೆ ದೊರೆತಿದೆ.
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಹಯೋಗದೊಂದಿಗೆ ಮೈಸೂರಿನ ರಾಣಿ ಕೃಷ್ಣಜಮ್ಮಣ್ಣಿ ಕ್ಷಯ ಮತ್ತು ಎದೆ ರೋಗಗಳ ಆಸ್ಪತ್ರೆ ಆವರಣದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ ರೂ. 94.50 ಕೋಟಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದ ಮೈಸೂರು, ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳಲ್ಲಿನ ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಚಿಕಿತ್ಸೆಗೆ ಅನುಕೂಲವಾಗಲಿದೆ. ಜೊತೆಗೆ ರೋಗಿಗಳ ಹೊರೆ ಮತ್ತು ಚಿಕಿತ್ಸೆಯ ವಿಳಂಬವನ್ನು ಕಡಿಮೆ ಮಾಡುತ್ತದೆ ಎಂದು ಸಚಿವರು ತಿಳಿಸಿದರು.
ಮಂಗಳೂರು ತಾಲ್ಲೂಕಿನ ಬಜ್ಪೆಯಲ್ಲಿ ಅಂದಾಜು ರೂ. 20 ಕೋಟಿ ವೆಚ್ಚದಲ್ಲಿ ಹೊಸ ಹಜ್ ಭವನ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಕರ್ನಾಟಕ ವಸತಿ ಮಂಡಳಿಯ ಮೂಲಕ ನಿರ್ಮಿಸಲಾಗುವ ಈ ಕಟ್ಟಡ ಹಜ್ ಯಾತ್ರಿಕರಿಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತದೆ ಮತ್ತು ಬೆಂಗಳೂರಿನ ಹಜ್ ಭವನದ ಮಾದರಿಯಲ್ಲಿ ಇದನ್ನುನಿರ್ಮಾಣ ಮಾಡಲಾಗುವುದು ಎಂದರು.
ತುಮಕೂರು ಜಿಲ್ಲೆಯ 13 ಹಳ್ಳಿಗಳನ್ನು ಕೊರಟಗೆರೆ ಪಟ್ಟಣ ಪಂಚಾಯಿತಿಯೊಂದಿಗೆ ವಿಲೀನಗೊಳಿಸಿ ಕೊರಟಗೆರೆ ಪಟ್ಟಣ ಪುರಸಭೆಯನ್ನು ರಚನೆ, ವಿಜಯಪುರ ನಗರ ಪಾಲಿಕೆಗೆ ಹೆಚ್ಚುವರಿ ಪ್ರದೇಶಗಳ ಸೇರ್ಪಡೆ, ಯಾದಗಿರಿಯ ದೋರನಹಳ್ಳಿ ಮತ್ತು ಬೀದರ್ ಜಿಲ್ಲೆಗಳ ರಾಜೇಶ್ವರವನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಡಿಯಲ್ಲಿ ಕೋರಮಂಗಲ-ಚಲ್ಲಘಟ್ಟ ಕಣಿವೆ, ಅಗರ ಮತ್ತು ಸಾರಕ್ಕಿಯಲ್ಲಿರುವ ಒಳಚರಂಡಿ ಸಂಸ್ಕರಣಾ ಮತ್ತು ಪಂಪಿಂಗ್ ಕೇಂದ್ರಗಳ ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ರೂ. 49.91 ಕೋಟಿ ಹಣವನ್ನು ಸಚಿವ ಸಂಪುಟ ಸಭೆ ಮಂಜೂರು ಮಾಡಿದೆ.