ಬೆಂಗಳೂರು: ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿಯ ಅಗತ್ಯವಿದ್ದು, ಭೂ ಹಂಚಿಕೆಯನ್ನು ತ್ವರಿತಗೊಳಿಸುವಂತೆಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಬರೆದಿರುವುದಾಗಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ.
ಮಂಡ್ಯದಲ್ಲಿ ದಿಶಾ ಸಮಿತಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ಮಂಡ್ಯವನ್ನು ಕೈಗಾರಿಕಾ ಕೇಂದ್ರವನ್ನಾಗಿ ಪರಿವರ್ತಿಸಲು ಸಂಪೂರ್ಣ ಬೆಂಬಲ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ರಾಜ್ಯ ಸರ್ಕಾರದ ಸಹಕಾರ ನಿರ್ಣಾಯಕವಾಗಿದೆ ಎಂದು ಹೇಳಿದರು.
ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ಕೋರಿ ಒಂದು ವರ್ಷದ ಹಿಂದೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ಪಾಪ.. ಅವರು ಜಾಗ ಹುಡುಕುತ್ತಲೇ ಇದ್ದಾರೆ. ಜಿಲ್ಲಾಧಿಕಾರಿಗಳು ಜಾಗ ಹುಡುಕಿದರೂ ಭೂಮಿ ಸಿಕ್ಕಿಲ್ಲ. ರಾಜ್ಯದಲ್ಲಿ ಕೇಂದ್ರದಿಂದ ಏನೇ ಕೆಲಸ ಆಗಬೇಕಿದ್ದರೂ ರಾಜ್ಯದ ಸಹಕಾರ ಬೇಕಿದೆ. ಸಹಕಾರ ಸಿಗುತ್ತದೆ ಎಂಬ ನಂಬಿಕೆ ಇದೆ.
ಮಂಡ್ಯ ಶಾಸಕರು ಜಾಗ ಕೊಡುವುದಾದರೆ ಕೊಡಲಿ. ಸರಕಾರದಿಂದ ಸ್ವಾಧೀನ ಮಾಡಿಸಿ ನಮಗೆ ಕೊಡಲಿ. ಎಲ್ಲರೂ ಸೇರಿ ಕೈಗಾರಿಕೆ ತಂದು ಉದ್ಯೋಗ ಸೃಷ್ಟಿ ಮಾಡೋಣ. ಮಂಡ್ಯಕ್ಕೆ ಏನು ತಂದ್ರಿ ಅಂತ ಕೇಳುವವರು ನೀವು ಜಿಲ್ಲೆಗೆ ಏನು ತಂದಿದ್ದೀರಾ ಹೇಳಿ? ಚಿಲ್ಲರೆ ರಾಜಕೀಯ ಮಾಡುವುದನ್ನು ನಿಲ್ಲಿಸಲಿ. ಕಾರ್ಖಾನೆ ಸ್ಥಾಪನೆ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಅವರು, ಸಚಿವ ಎಂ.ಬಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದೇನೆ. ಅವರಿಂದ ಏನು ಪ್ರತಿಕ್ರಿಯೆ ಬರುತ್ತದೋ ನೋಡೋಣ ಎಂದು ತಿಳಿಸಿದರು.
ಈ ನಡುವೆ ಮಂಡ್ಯದಂತಹ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳು ಬೆಂಗಳೂರಿನ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಡ್ಯ ತನ್ನ ಫಲವತ್ತಾದ ಭೂಮಿ ಮತ್ತು ಕಬ್ಬು ಆಧಾರಿತ ಆರ್ಥಿಕತೆಗೆ ಹೆಸರುವಾಸಿಯಾಗಿದೆ. ಕೃಷಿ ಅದರ ಬೆನ್ನೆಲುಬಾಗಿ ಉಳಿದಿದ್ದರೂ, ಜಿಲ್ಲೆಯು ಕೃಷಿ ಸಂಸ್ಕರಣೆ, ಸಕ್ಕರೆ, ಬೆಲ್ಲ ಮತ್ತು ಜವಳಿ ಕೈಗಾರಿಕೆಗಳಲ್ಲಿ ಬಲವಾದ ನೆಲೆಯನ್ನು ಅಭಿವೃದ್ಧಿಪಡಿಸಿದೆ. ದೊಡ್ಡ ಮತ್ತು ಉತ್ತಮ ತರಬೇತಿ ಪಡೆದ ಕಾರ್ಮಿಕ ಬಲದ ಲಭ್ಯತೆ ಮತ್ತು ಬೆಂಗಳೂರು ಮತ್ತು ಮೈಸೂರು ಎರಡಕ್ಕೂ ಹೆದ್ದಾರಿ ಸಂಪರ್ಕದಿಂದಾಗಿ ಮಂಡ್ಯದಲ್ಲಿ ಜವಳಿ ಉದ್ಯಮವು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.
ಇದೀಗ ಕುಮಾರಸ್ವಾಮಿಯವರ ಈ ಪ್ರಸ್ತಾವನೆಯು ಕೇಂದ್ರ ಮತ್ತು ರಾಜ್ಯ ಕೈಗಾರಿಕಾ ಬೆಳವಣಿಗೆಯ ಚೌಕಟ್ಟಿನ ಅಡಿಯಲ್ಲಿ ಉಕ್ಕು ಮತ್ತು ದೊಡ್ಡ ಪ್ರಮಾಣದ ಉತ್ಪಾದನೆ ಸೇರಿದಂತೆ ಭಾರೀ ಕೈಗಾರಿಕೆಗಳನ್ನು ಆಕರ್ಷಿಸುವ ಗುರಿಗೆ ದೊಡ್ಡ ತಿರುವಾಗಲಿದೆ.
ಈ ಉಪಕ್ರಮವು ಅನುಮೋದನೆ ಪಡೆದರೆ, ಮಂಡ್ಯದ ಆರ್ಥಿಕತೆಯನ್ನು ವೈವಿಧ್ಯಗೊಳಿಸಬಹುದು, ಹೊಸ ಹೂಡಿಕೆ, ಮೂಲಸೌಕರ್ಯ ಮತ್ತು ಉದ್ಯೋಗಗಳನ್ನು ತರಬಹುದು ಎಂದು ತಿಳಿಸಿದ್ದಾರೆ.