ಬೆಂಗಳೂರು: ಕೇಂದ್ರ ಸರ್ಕಾರ ಸಕ್ಕರೆಗೆ ಹೊಸ MSP ವ್ಯವಸ್ಥೆ ರೂಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಶನಿವಾರ ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ, ಸಕ್ಕರೆಗೆ ಗೃಹಬಳಕೆ ಹಾಗೂ ವಾಣಿಜ್ಯಿಕ ಬಳಕೆ ಎಂಬ ಪ್ರತ್ಯೇಕ ವರ್ಗವಿರುವ ಹೊಸ ಎಮ್‌ಎಸ್‌ಪಿ ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಬೇಕು. ಇದರಿಂದ ವಾಣಿಜ್ಯ ಸಂಬಂಧಿತ ಮಾರಾಟದಿಂದ ಬರುವ ಹೆಚ್ಚಿನ ಲಾಭವು ರೈತರಿಗೆ ಪಾವತಿಸುವ ದರದಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ.
ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರವು ಗಣನೀಯ ಆರ್ಥಿಕ ನೆರವು ಹಾಗೂ ಪ್ರೋತ್ಸಾಹ ಧನ ನೀಡಿರುವುದಾಗಿ ನಿಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದೀರಿ. ಅದು ವಾಸ್ತವವಾಗಿದ್ದರೆ, ಕರ್ನಾಟಕದ ಕಾರ್ಖಾನೆಗಳಿಗೆ ಯಾವ ರೀತಿ ಸಹಾಯಹಸ್ತ ಚಾಚಿದ್ದೀರಿ ಎಂಬುದನ್ನು ಪ್ರತಿ ಕಾರ್ಖಾನೆಯ ಅಂಕಿಅಂಶಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ದುರಂತವೆಂದರೆ 2025, ನವೆಂಬರ್ 7ರಂದು ಕಬ್ಬು ದರಕ್ಕೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಚರ್ಚಿಸಲು ಎಲ್ಲ ಪಾಲುದಾರರನ್ನು ಆಹ್ವಾನಿಸಲಾಗಿದ್ದ ಸಭೆಗೆ ಕರ್ನಾಟಕದ ಯಾವೊಬ್ಬ ಕೇಂದ್ರ ಸಚಿವರೂ ಆಗಮಿಸಿರಲಿಲ್ಲ. ತಮ್ಮ ಧ್ವನಿಯನ್ನು ರಾಜ್ಯದ ಪ್ರತಿನಿಧಿಗಳು ದೆಹಲಿ ತಲುಪಿಸುತ್ತಾರೆ ಎಂಬ ಭರವಸೆಯನ್ನು ರೈತರು ಇಟ್ಟುಕೊಂಡಿದ್ದರು. ಆದರೆ ಅವರ ನಿರೀಕ್ಷೆಯನ್ನು ಹುಸಿಗೊಳಿಸುವ ಮೂಲಕ ಮತ್ತೊಮ್ಮೆ ಅವರನ್ನು ವಂಚಿಸಲಾಯಿತು ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ತನ್ನ ಮಿತವಾದ ಸಂಪನ್ಮೂಲಗಳಿಂದ ಕಬ್ಬು ಬೆಳೆಗಾರರಿಗೆ ಎಲ್ಲ ರೀತಿಯ ಸಾಧ್ಯ ಪರಿಹಾರವನ್ನು ವಿಸ್ತರಿಸುತ್ತಿರುವಾಗ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಪದೇ ಪದೇ ಮಲತಾಯಿ ಧೋರಣೆ ತೋರಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ತೆರಿಗೆಗಳ ಹಂಚಿಕೆ ಮತ್ತು ಅನುದಾನಗಳಲ್ಲಿ ಕರ್ನಾಟಕಕ್ಕೆ ಸೇರಬೇಕಾದ ₹2 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ಕೊಟ್ಟಿಲ್ಲ. ಪ್ರತಿ ವರ್ಷ ಕೇವಲ ತೆರಿಗೆ ಹಂಚಿಕೆ ಅನ್ಯಾಯದಿಂದಲೇ ಸುಮಾರು ₹25,000 ಕೋಟಿ ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಹಿರಿಯ ಕೇಂದ್ರ ಸಚಿವರಾಗಿರುವ ನೀವು, ನಿಮ್ಮ ಜನರ ಪರವಾಗಿ ಧ್ವನಿ ಎತ್ತಬೇಕು ಎಂದು ನಾನು ಒತ್ತಾಯಿಸುತ್ತಿದ್ದೇನೆ. ಬಿಸಿಲಿನಡಿ ಶ್ರಮ ಪಡುತ್ತಿರುವ ಕಬ್ಬು ಬೆಳೆಗಾರರ ಜೊತೆ ನಿಲ್ಲಬೇಕು ಎಂದು ಒತ್ತಾಯಿಸುತ್ತಿದ್ದೇನೆ. ಆಡಳಿತದ ನಿಜವಾದ ಮಾನದಂಡವು ಅಂಕಿಸಂಖ್ಯೆಗಳ ಉಲ್ಲೇಖವಲ್ಲ, ರೈತರ ಮುಖದ ಮೇಲಿನ ಮಂದಹಾಸ ಎಂಬುದನ್ನು ನೆನಪಿನಲ್ಲಿಡಿ. ಕೇಂದ್ರ ಸರ್ಕಾರವು ತನ್ನ ನೀತಿಗಳನ್ನು ಮರುಪರಿಶೀಲಿಸಿ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಸಲ್ಲಬೇಕಿರುವ ನ್ಯಾಯಯುತ ಬೆಲೆ ಹಾಗೂ ಗೌರವವನ್ನು ಒದಗಿಸುವಲ್ಲಿ ತಕ್ಷಣ ಕ್ರಮ ಕೈಗೊಳ್ಳುತ್ತದೆ ಎಂದು ಮನಃಪೂರ್ವಕವಾಗಿ ಆಶಿಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.