ಬೆಂಗಳೂರು: ಮನೆಗೆ ಫೋನ್ ಕರೆ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಕಾಲಿನಿಂದ ಎಲ್ಲೆಂದರಲ್ಲಿ ಒದ್ದು, ಮನಸೋ ಇಚ್ಚೆ ಥಳಿಸಿರುವ ಘಟನೆಯ ಬೆನ್ನಲ್ಲೇ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು, ಚಿತ್ರದುರ್ಗ ಜಿಲ್ಲೆಯ ವಸತಿ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದ ಅಧ್ಯಯನ ವಸತಿ ಶಾಲೆಯ ಮುಖ್ಯೋಪಾಧ್ಯಾಯ ವೀರೇಶ್ ಹಿರೇಮಠ ಮತ್ತು ಚಳ್ಳಕೆರೆಯ ಗುರು ತಿಪ್ಪೇಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ವಿರುದ್ಧ ಉಪ ಲೋಕಾಯುಕ್ತರು ಈ ಕ್ರಮ ಕೈಗೊಂಡಿದ್ದು, ವಿವರಣೆ ಕೋರಿದ್ದಾರೆ.
ಒಂಬತ್ತು ವರ್ಷದ ಬಾಲಕ ತರುಣ್ ಮೇಲೆ ಶಿಕ್ಷಕಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಕುರಿತ ವಿಡಿಯೋ ಅಕ್ಟೋಬರ್ 21 ರಂದು ವೈರಲ್ ಆಗಿತ್ತು.
ಘಟನೆಯ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಉಪ ಲೋಕಾಯುಕ್ತರು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಉಪ ಲೋಕಾಯುಕ್ತರು ಹುಬ್ಬಳ್ಳಿಯ ಖಾಸಗಿ ವೈದ್ಯಕೀಯ ಅಂಗಡಿಗಳಿಂದ ಔಷಧಿ ಖರೀದಿಸುವಂತೆ ಒತ್ತಡ ಹೇರಿದ್ದಕ್ಕಾಗಿ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿವಾಸ ವೈದ್ಯಾಧಿಕಾರಿ ಡಾ. ರಾಜಶೇಖರ್ ದ್ಯಾಬೇರಿ ಮತ್ತು ಸಹಾಯಕ ಆಡಳಿತಾಧಿಕಾರಿ ಡಾ. ಮಂಜುನಾಥ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗದಗ ಜಿಲ್ಲೆಯ ನರಗುಂದದ ದಾವಲ್ಸಾಬ್ ಎಂಬ ವ್ಯಕ್ತಿ ವಿಷಪೂರಿತ ಎಲೆಗಳನ್ನು ಸೇವಿಸಿದ್ದ ತನ್ನ ಒಂದೂವರೆ ವರ್ಷದ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಚಿಕಿತ್ಸೆಗೆ ಅಗತ್ಯವಾದ 'ಪೈಸೋಸ್ಟಿಸ್‌ಗಮನ್ ಇಂಜೆಕ್ಷನ್' ಪಡೆಯಲು ವೈದ್ಯರು ಕೇಳಿದ್ದು, ಮಧ್ಯರಾತ್ರಿಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ವಿವಿಧ ವೈದ್ಯಕೀಯ ಅಂಗಡಿಗಳಲ್ಲಿ ಇಂಜೆಕ್ಷನ್‌ಗಾಗಿ ಹುಡುಕಾಡಿದರೂ ಸಿಕ್ಕಿಲ್ಲ.
ಘಟನೆ ಬೆನ್ನಲ್ಲೇ ನವೆಂಬರ್ 26 ರೊಳಗೆ ವರದಿ ಸಲ್ಲಿಸುವಂತೆ ಧಾರವಾಡದ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ಉಪ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.