ಬೆಂಗಳೂರು: ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಹಾಗೂ ನಗರ ಮೂಲದ ಫಾರ್ಮಾಸ್ಯುಟಿಕಲ್ಸ್ ನಡುವಿನ ಅಧಿಕೃತ ಇಮೇಲ್ ನ್ನು ಹ್ಯಾಕ್ ಮಾಡಿದ ಸೈಬರ್ ವಂಚಕರು ರೂ. 2.16 ಕೋಟಿಯನ್ನು ಬೇರೊಂದು ಖಾತೆಗೆ ಯಶಸ್ವಿಯಾಗಿ ವರ್ಗಾವಣೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಬೆಂಗಳೂರು ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಫಾರ್ಮಾಸ್ಯುಟಿಕಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಕೆ. ಮಹೇಶ್ ಬಾಬು ಅವರು ವಂಚನೆಯ ಬಗ್ಗೆ ದೂರು ದಾಖಲಿಸಿರುವುದಾಗಿ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಸರಬರಾಜು ಮಾಡಿದ ಸರಕುಗಳಿಗೆ ರೂ. 2.16 ಕೋಟಿ ಪಾವತಿಯನ್ನು ನಿರೀಕ್ಷಿಸುತ್ತಿರುವುದಾಗಿ ಕಂಪನಿ ಹೇಳಿದೆ.
ತಮ್ಮ ವ್ಯವಹಾರದ ಅವಧಿಯಲ್ಲಿ, ಡಾ. ರೆಡ್ಡೀಸ್ ಲ್ಯಾಬೋರೇಟರೀಸ್‌ಗೆ ಸರಕುಗಳನ್ನು ಸರಬರಾಜು ಮಾಡಲಾಗಿತ್ತು. ಅಧಕ್ಕಾಗಿ ರೂ. 2.16 ಕೋಟಿ ಪಾವತಿಯನ್ನು ನಿರೀಕ್ಷಿಸಲಾಗಿತ್ತು ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಆದಾಗ್ಯೂ, ನವೆಂಬರ್ 3 ರಂದು, ಹ್ಯಾಕರ್‌ಗಳು ಎರಡು ಕಂಪನಿಗಳ ನಡುವಿನ ಇಮೇಲ್ ಹ್ಯಾಕ್ ಮಾಡಿದ್ದು, ಡಾ. ರೆಡ್ಡೀಸ್ ಹಣಕಾಸು ಮತ್ತು ಖಾತೆಗಳ ತಂಡಕ್ಕೆ ವಂಚನೆಯ ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಗ್ರೂಪ್ ಫಾರ್ಮಾಸ್ಯುಟಿಕಲ್ಸ್‌ನ ಅಧಿಕಾರಿಗಳ ನೆಪದಲ್ಲಿ ಸುಳ್ಳು ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದಾರೆ. ಪರಿಣಾಮ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ನ. 4 ರಂದು 2.16 ಕೋಟಿ ರೂ.ಗಳ ಪಾವತಿಯನ್ನು ವಂಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಿದೆ. ವಂಚಕರ ಬ್ಯಾಂಕ್ ಖಾತೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಪಾವತಿಸಲಾದ ಹಣವನ್ನು ಮರುಪಡೆಯಲು ಪೊಲೀಸರ ಬಳಿ ದೂರುದಾರರು ಮನವಿ ಮಾಡಿಕೊಂಡಿದ್ದಾರೆ.
ದೂರಿನ ಆಧಾರದ ಮೇಲೆ, ನವೆಂಬರ್ 5 ರಂದು ಅಪರಿಚಿತ ಸೈಬರ್ ವಂಚಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318(4) (ವಂಚನೆ) ಮತ್ತು 319(2) (ವ್ಯಕ್ತಿತ್ವದ ಮೂಲಕ ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.