ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ನಲ್ಲಿ ಕೈಗಾರಿಕೆ ಇಲಾಖೆ ನಿರ್ಮಿಸಿರುವ ರಾಜ್ಯದ ಸಾಂಪ್ರದಾಯಿಕ ಉತ್ಪನ್ನಗಳ ಮಾರಾಟ ಕೇಂದ್ರವಾದ "ಕಲಾ ಲೋಕ ಮಳಿಗೆ"ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಉದ್ಘಾಟಿಸಿದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಕೆಜೆ ಜಾರ್ಜ್, ಕೆ. ಎಚ್. ಮುನಿಯಪ್ಪ, ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ಕರ್ನಾಟಕದ ಕೈಗಾರಿಕಾ ಭೂಪಟದಲ್ಲಿ ಇದೊಂದು ಸಂತಸದ ಕ್ಷಣವಾಗಿದೆ. ದೇಶ-ವಿದೇಶಗಳ ಗ್ರಾಹಕರಿಗೆ ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮತ್ತು ಜಿಐ ಮಾನ್ಯತೆ ಹೊಂದಿರುವ ವಿಶಿಷ್ಟ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಮಳಿಗೆ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜನನಿಬಿಡತೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಪ್ರತಿದಿನವೂ ಇಲ್ಲಿ ಹತ್ತಾರು ಸಾವಿರ ಪ್ರಯಾಣಿಕರು ಬರುತ್ತಿರುತ್ತಾರೆ. ಇಂಥವರಿಗೆ ಇಲ್ಲಿಗೆ ಬಂದ ತಕ್ಷಣವೇ ಕರ್ನಾಟಕದ ಅಭಿಮಾನದ ಪಯಣ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ಕಲಾಲೋಕ ಮಳಿಗೆ ನಿರ್ಮಿಸಲಾಗಿದೆ. ಇದರ ಮೂಲಕ ಕರ್ನಾಟಕದ ಹೆಮ್ಮಯ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ಮಾರಾಟದ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಈ ಮಳಿಗೆಯಲ್ಲಿ ಚನ್ನಪಟ್ಟಣದ ಆಟಿಕೆ ಮತ್ತು ಬೊಂಬೆಗಳು, ಮೈಸೂರು ಸಿಲ್ಕ್ ಸೀರೆ, ಇಳಕಲ್ ಸೀರೆ, ಲಂಬಾಣಿ ಕಸೂತಿ ಸೇರಿದಂತೆ ನಾಡಿನ ಅಸ್ಮಿತೆಯನ್ನು ಬಿಂಬಿಸುವ ಉತ್ಪನ್ನಗಳು ಲಭ್ಯವಿದೆ.ಅಲ್ಲದೆ, ಜಿಐ ಟ್ಯಾಗ್ ಪಡೆದ ಕರ್ನಾಟಕದ ಆಯ್ದ ಉತ್ಪನ್ನಗಳೂ ಈ ಮಳಿಗೆಯಲ್ಲಿ ದೊರೆಯಲಿವೆ ಎಂದರು.
ಸಚಿವ ಎಂ. ಬಿ. ಪಾಟೀಲ ಮಾತನಾಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ವಿಶಿಷ್ಟ ಮಳಿಗೆಯು ನಮ್ಮ ರಾಜ್ಯದ ಜಿಐ ಟ್ಯಾಗ್ ಪಡೆದ ವೈಶಿಷ್ಟ್ಯಮಯ ಉತ್ಪನ್ನಗಳು ಹಾಗೂ ಕಾಲಾತೀತ ಕರಕುಶಲತೆಯನ್ನು ಸುಂದರವಾಗಿ ಪ್ರದರ್ಶಿಸಲಿದೆ ಎಂದು ತಿಳಿಸಿದರು.
ಮೈಸೂರ್ ಸ್ಯಾಂಡಲ್ ಸೋಪ್, ಮೈಸೂರು ರೇಷ್ಮೆ, ಶ್ರೀಗಂಧದ ಶಿಲ್ಪಗಳು, ರೋಸ್’ವುಡ್ ಕೆತ್ತನೆಗಳು, ಚರ್ಮದ ಕರಕುಶಲ ವಸ್ತುಗಳು, ಕೈಮಗ್ಗ ಸೀರೆಗಳು, ಕಾಫಿ ಮತ್ತು ಚನ್ನಪಟ್ಟಣದ ಆಟಿಕೆಗಳು ಸೇರಿದಂತೆ ಕರ್ನಾಟಕದ ಅನನ್ಯ ಸೊಬಗನ್ನು ಒಂದೇ ಮಳಿಗೆಯಲ್ಲಿ ವೀಕ್ಷಿಸುವುದರ ಜೊತೆಗೆ ಖರೀದಿ ಮಾಡಲು ಅವಕಾಶವಿದೆ ಎಂದರು.