ಮೈಸೂರು: ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳ ಹಿನ್ನೆಲೆಯಲ್ಲಿ ಅರಣ್ಯಗಳಲ್ಲಿ ವಾಸಿಸುವ ಜನರಿಗೆ ಸ್ವಯಂಪ್ರೇರಿತ ಸ್ಥಳಾಂತರ ಮತ್ತು ಪುನರ್ವಸತಿ ಯೋಜನೆಯನ್ನು ನಮ್ಮ ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಸೋಮವಾರ ಹೇಳಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾರ್ಕಳ ವ್ಯಾಪ್ತಿಯ ನಿವಾಸಿಗಳ ಪುನರ್ ವಸತಿ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ 2005ರ ಸರಕಾರಿ ಸುತ್ತೋಲೆ ಪುನರ್ ಪರಿಶೀಲಿಸಿ ಮರು ಆದೇಶ ಮಾಡುವಂತೆ ಕೋರಿ ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದ ನಿಯೋಗವು ಸೋಮವಾರ ವಿಕಾಸಸೌಧದಲ್ಲಿ ಸಲ್ಲಿಸಿದ ಮನವಿ ಸ್ವೀಕರಿಸಿ ಸಚಿವರು ಮಾತನಾಡಿದರು.
ಹಿಂದೆ ವನ್ಯಜೀವಿಗಳ ಕಳ್ಳಬೇಟೆ ನಡೆಯುತ್ತಿತ್ತು. ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇದನ್ನು ನಿಯಂತ್ರಿಸಿದ್ದು, ಉತ್ತಮ ಪರಿಸರವಿರುವುದರಿಂದ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಹೆಚ್ಚುತ್ತಿರುವ ವನ್ಯಜೀವಿಗಳ ಸಂಖ್ಯೆಗೆ ಅನುಗುಣವಾಗಿ ವನ ಪ್ರದೇಶ ಹೆಚ್ಚುತ್ತಿಲ್ಲ, ಇದರಿಂದ ಸಮಸ್ಯೆ ಉಲ್ಬಣಿಸುತ್ತಿದೆ ಎಂದು ಹೇಳಿದರು.
1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಇದ್ದ ಹುಲಿಗಳ ಸಂಖ್ಯೆ ಇಂದು 170ಕ್ಕೂ ಹೆಚ್ಚಾಗಿದೆ, ಹೀಗಾಗಿ ದುರ್ಬಲ ಹುಲಿಗಳು ಕಾಡಿನಿಂದ ಹೊರಬರುತ್ತಿವೆ. ಹಗಲು ರಾತ್ರಿ ಇಲಾಖೆ ಶ್ರಮಿಸುತ್ತಿದ್ದರು, ಮಾನವ-ವನ್ಯಜೀವಿ ಸಂಘರ್ಷದ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಹೆಚ್ಚಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ಶೀಘ್ರವೇ ಸಭೆ ನಡೆಯಲಿದೆ ಎಂದು ತಿಳಿಸಿದರು.
ಅರಣ್ಯದೊಳಗಿರುವ ಜನವಸತಿಗಳನ್ನು ಸ್ಥಳಾಂತರದಿಂದ ಅರಣ್ಯವಾಸಿಗಳು ಮತ್ತು ಅವರ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ಜೊತೆಗೆ ಮಾನವ-ವನ್ಯಜೀವಿ ಸಂಘರ್ಷವೂ ಕಡಿಮೆ ಆಗುತ್ತದೆ. ಸ್ಥಳಾಂತರಕ್ಕೆ ಪರಿಹಾರ ನೀಡಬೇಕಾಗುತ್ತದೆ. ಇದನ್ನು ಒಂದೆ ಬಾರಿಗೆ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಮಾಡಬೇಕಾಗುತ್ತದೆ. ಬಜೆಟ್ ನಲ್ಲಿ ಇದಕ್ಕೆ ಹಣ ಮೀಸಲಿಟ್ಟರೆ ಇದು ಸಾಧ್ಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.