ಮೈಸೂರು: ಭಾರತ ಎಂದಿಗೂ ಹಿಂದೂ ರಾಷ್ಟ್ರ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಮ್ಮದು ಬಹುತ್ವದ ರಾಷ್ಟ್ರ. ಹಲವು ಕಲೆ, ಸಂಸ್ಕೃತಿ, ಭಾಷೆ, ಧರ್ಮಗಳಿರುವ ದೇಶ. ಆರ್‌ಎಸ್‌ಎಸ್ ಸಂಘಪರಿವಾರ ಬಹಳ ದಿನದಿಂದ ಹಿಂದೂ ರಾಷ್ಟ್ರದ ಬಗ್ಗೆ ಹೇಳುತ್ತಿದೆ. ಆದರೆ ಇದು ಎಂದಿಗೂ ಆಗುವುದಿಲ್ಲ ಎಂದು ಹೇಳಿದರು.
ಇನ್ನು ಜಿ.ಟಿ.ದೇವೇಗೌಡರನ್ನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಕೈ ಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಪಕ್ಷಕ್ಕೆ ಸೇರಿದ್ದು, ನಾನು ಯಾರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯುವುದಿಲ್ಲ. ಬಂದರೆ ಯಾಕೆ ಬಂದ್ರಿ ಎಂದು ಕೇಳುವುದಿಲ್ಲ. ಅದು ಅವರವರಿಗೆ ಬಿಟ್ಟದ್ದ. ನಾನು ಜಿ.ಟಿ ದೇವೇಗೌಡ ಒಂದೇ ಕ್ಷೇತ್ರದವರು. ಹೀಗಾಗಿ ಸ್ನೇಹ ಇದೇ ಅಷ್ಟೇ ಎಂದರು.
ನವೆಂಬರ್ 15ಕ್ಕೆ ದೆಹಲಿಗೆ ಹೋಗುತ್ತೇನೆ. ಕಪಿಲ್ ಸಿಬಲ್ ಅವರ ಕಾರ್ಯಕ್ರಮ ಇದೆ. ಅದಕ್ಕಾಗಿ ದೆಹಲಿಗೆ ಹೋಗುತ್ತೇನೆ. ಅವತ್ತೇ ಹೋಗಿ ಅವತ್ತೇ ವಾಪಸ್ ಬರುವ ಯೋಜನೆ ಇದೆ. ರಾಹುಲ್ ಗಾಂಧಿ ಅವರ ಬಳಿ ಸಮಯ ಕೇಳಿದ್ದೇನೆ. ಸಮಯ ಕೊಟ್ಟರೆ ಅಲ್ಲೇ ಉಳಿದುಕೊಂಡು ಮರುದಿನ ಬರುತ್ತೇನೆ. ರಾಹುಲ್ ಗಾಂಧಿ ಸಮಯ ಕೊಟ್ಟರೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡುತ್ತೇನೆ. ಇಲ್ಲದಿದ್ದರೆ ಇಲ್ಲ ಎಂದು ತಿಳಿಸಿದರು.