ಬೆಂಗಳೂರು: ಅಸುರಕ್ಷಿತ ಲೈಂಗಿಕತೆ ಮತ್ತಿತರ ಕಾರಣಗಳಿಂದ ಜನಿಸಿದ ಶಿಶುಗಳನ್ನು ಕಸದ ಬುಟ್ಟಿಗಳು ಅಥವಾ ಚರಂಡಿಗಳಲ್ಲಿ ಬಿಸಾಡುವುದನ್ನು ತಡೆಯಲು, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ‘ಮಮತೆಯ ತೊಟ್ಟಿಲು’ ಯೋಜನೆಯನ್ನು ಪ್ರೋತ್ಸಾಹಿಸುತ್ತಿದೆ. ನಗರದ 42 ಸ್ಥಳಗಳಲ್ಲಿ ಇರಿಸಲಾಗಿರುವ ತೊಟ್ಟಿಲುಗಳಲ್ಲಿ ಪೋಷಕರು ಅಧಿಕಾರಿಗಳು ಅಥವಾ ಪೊಲೀಸರ ಯಾವುದೇ ಭಯವಿಲ್ಲದೆ ಸುರಕ್ಷಿತ ತೊಟ್ಟಿಲುಗಳನ್ನು ತಮ್ಮ ಶಿಶುವನ್ನು ಹಾಕಿ ಹೋಗಬಹುದಾಗಿದೆ.
ಶಿಶುಗಳನ್ನು ಎಲ್ಲೆಂದರಲ್ಲಿ ಹಾಕದೆ ಮಗುವಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಇಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಬೆಂಗಳೂರು ಪೂರ್ವದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮೀನಾಕ್ಷಿ ಎಸ್ ಕಬೇಡಿ ಹೇಳಿದರು.
ಇದು ಪರಿತ್ಯಕ್ತ ಪ್ರತಿಯೊಂದು ಮಗುವೂ ಕಾನೂನುಬದ್ಧವಾಗಿ ದತ್ತು ವ್ಯವಸ್ಥೆಯಡಿ ಬರುವುದನ್ನು ಖಾತರಿಪಡಿಸುತ್ತದೆ. ಹೆಚ್ಚಿನ ಪೋಕ್ಸೊ ಪ್ರಕರಣಗಳಲ್ಲಿ, ಲೈಂಗಿಕ ದೌರ್ಜನ್ಯ ಅಥವಾ ಅಸುರಕ್ಷಿತ ಲೈಂಗಿಕತೆಯ ನಂತರ ಹುಡುಗಿಯರು ತಾವು ಗರ್ಭಿಣಿಯಾಗಿದ್ದೇವೆ ಎಂದು ತಡವಾಗಿ ಅರಿತುಕೊಳ್ಳುತ್ತಾರೆ. ಅವರು ಪೊಲೀಸ್ ಕ್ರಮ ಮತ್ತು ಶಿಕ್ಷೆಗೆ ಹೆದರಿ ಮಗುವನ್ನು ತ್ಯಜಿಸುತ್ತಾರೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಇವೆ ಮಮತೆಯ ತೊಟ್ಟಿಲುಗಳು?
ಬೆಂಗಳೂರಿನ ಪೂರ್ವ ವಲಯದ ಏಳು ಸ್ಥಳಗಳಲ್ಲಿ ಸಿಸಿಟಿವಿ ಮೇಲ್ವಿಚಾರಣೆ ಇಲ್ಲದೆ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ. ಸಿವಿ ರಾಮನ್ ಜನರಲ್ ಆಸ್ಪತ್ರೆ, ವರ್ತೂರು ಮತ್ತು ಆವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸೇಂಟ್ ಮೈಕೆಲ್ಸ್ ಹೋಮ್ ಕಾನ್ವೆಂಟ್, ಶಿಶು ಮಂದಿರ ಮತ್ತು ತಾಲ್ಲೂಕು ಆಸ್ಪತ್ರೆ ಮತ್ತು ಕೆಆರ್ ಪುರಂನ ಡಿಸಿಪಿಒಗಳ ಬಳಿ ಮಮತೆಯ ತೊಟ್ಟಿಲುಗಳಿವೆ. ಎಲ್ಲೆಲ್ಲೋ ಚರಂಡಿಗೆ ಶಿಶುವನ್ನು ಹಾಕಿ ಹೋಗುವ ಬದಲು ಈ ತೊಟ್ಟಿಲುಗಳಲ್ಲಿಡಬಹುದು.
ತಾಯಂದಿರು 1098 ಅಥವಾ 112 ಗೆ ಸಹ ಕರೆ ಮಾಡಬಹುದು ಮತ್ತು ಮಾಹಿತಿಯನ್ನು ನಾವೂ ಗೋಪ್ಯವಾಗಿ ಇಡುತ್ತೇವೆ. ನಾವು ಈಗ ಮಕ್ಕಳ ದತ್ತು ಸ್ವೀಕಾರಕ್ಕಿಂತ ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಮೀನಾಕ್ಷಿ ತಿಳಿಸಿದ್ದಾರೆ.
ಕಳೆದ ವರ್ಷವೊಂದರಲ್ಲೇ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ 25 ಶಿಶುಗಳನ್ನು ಪರಿತ್ಯಜಿಸಿದ ಪ್ರಕರಣ ವರದಿಯಾಗಿತ್ತು ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕಿ ಹಲೀಮಾ ತಿಳಿಸಿದ್ದಾರೆ. ಮಮತೆಯ ತೊಟ್ಟಿಲು ಯೋಜನೆ ಒಂದು ವರ್ಷವನ್ನು ಪೂರೈಸಿದ್ದು, ಇಲ್ಲಿಯವರೆಗೆ ಕೇವಲ ಒಂದು ಶಿಶು ಮಾತ್ರ ಬಂದಿದೆ. ಪರಿತ್ಯಕ್ತ ವಿಕಲಚೇತನ ಮಕ್ಕಳಿಗೂ ಇದು ಸುರಕ್ಷಿತ ಯೋಜನೆಯಾಗಿದೆ. ಆ ಮಕ್ಕಳನ್ನು ಸರ್ಕಾರ ಹಾಗೂ ಎನ್ ಜಿಎಗಳು ಆರೈಕೆ ಮಾಡುತ್ತಾರೆ.
21 ಜಿಲ್ಲೆಗಳಲ್ಲಿ 21 ಸರ್ಕಾರಿ ಸ್ವಾಮ್ಯದ ಮಕ್ಕಳ ದತ್ತು ಸಂಸ್ಥೆಗಳು ಮತ್ತು 24 ಖಾಸಗಿಯ ವಿಶೇಷ ದತ್ತು ಸಂಸ್ಥೆಗಳು ಇವೆ. ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 190 ಮಕ್ಕಳನ್ನು ದತ್ತು ಪಡೆಯಲು ಅನುಕೂಲ ಮಾಡಿಕೊಟ್ಟಿದ್ದೇವೆ ಮತ್ತು ಉಳಿದ ನಾಲ್ಕು ತಿಂಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇಬ್ಬರು ಮಕ್ಕಳು ವಿದೇಶಿ ದತ್ತು ಸ್ವೀಕಾರಕ್ಕೆ ಅರ್ಹರಾಗಿದ್ದಾರೆ ಮತ್ತು ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಮಮತೆಯ ತೊಟ್ಟಿಲು ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಲ್ಲ. ತಮಿಳುನಾಡು ಮೊದಲನೆಯದು, ತದನಂತರ ಕೇರಳ, ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ತಜ್ಞರು ತಿಳಿಸಿದ್ದಾರೆ.