ರಾಜ್ಯ

News headlines 14-11-2025 | ಬಿಹಾರದಲ್ಲಿ NDA ಗೆ ಭರ್ಜರಿ ಬಹುಮತ; ಇದು ವೋಟ್ ಚೋರಿ- ಸಿದ್ದರಾಮಯ್ಯ; ಸಾಲುಮರದ ತಿಮ್ಮಕ್ಕ ಇನ್ನಿಲ್ಲ; ನಕಲಿ ಕಾಲ್ ಸೆಂಟರ್ ಪತ್ತೆ; 33 ಮಂದಿ ಬಂಧನ; ಕೃಷಿ ಮೇಳ-2025: ಐದು ಹೊಸ ಬೆಳೆ ತಂತ್ರಜ್ಞಾನ ಬಿಡುಗಡೆ

Bihar Elections 2025: BJP ನೇತೃತ್ವದ NDA ಗೆ ಭರ್ಜರಿ ಬಹುಮತ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ 201 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿದ್ದು, 36 ಸ್ಥಾನಗಳನ್ನು ಪಡೆದಿರುವ ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯುಂಟಾಗಿದೆ. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಮೊದಲ ಚುನಾವಣೆಯಲ್ಲಿ ಸೀಟುಗಳ ಲೆಕ್ಕದಲ್ಲಿ ಗಮನಾರ್ಹ ಸಾಧನೆ ಮಾಡಲು ವಿಫಲವಾಗಿದೆ. ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಈ ಫಲಿತಾಂಶ ತಮ್ಮ ಪಕ್ಷ ಮತ್ತು ಅದರ ಮಿತ್ರಪಕ್ಷಗಳಿಗೆ 'ಪಾಠ'ವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಇಂಡಿ ಮೈತ್ರಿಕೂಟಕ್ಕೆ ಭವಿಷ್ಯದಲ್ಲಿ ಹೊಸ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಹಾರದಲ್ಲಿ ಮತಗಳ್ಳತನವಾಗಿದೆ ಎಂದು ಆರೋಪ ಮಾಡಿದ್ದಾರೆ. ಬಿಹಾರ ಚುನಾವಣೆಯಲ್ಲಿ ಯಾಕೆ ಹಿನ್ನಡೆ ಆಗಿದೆ ಗೊತ್ತಿಲ್ಲ, ನಾನು ಇನ್ನೂ ನೋಡಿಲ್ಲ, ಸರಿಯಾಗಿ ಮಾಹಿತಿ ಪಡೆದು ಮತ್ತೆ ಮಾತನಾಡುತ್ತೇನೆಂದು ಹೇಳಿದ್ದಾರೆ.

ವೃಕ್ಷ ಮಾತೆ Salumarada Timmakka ನಿಧನ-ಗಣ್ಯರ ಸಂತಾಪ

ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911 ಜೂನ್‌ 30ರಂದು ಜನಿಸಿದ್ದ ಅವರು, ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿದ್ದರು. ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ್ದರು. ಪರಿಸರ ಸಂರಕ್ಷಣೆಯಲ್ಲಿ ತಿಮ್ಮಕ್ಕ ಅವರ ಮಹತ್ತರ ಸಾಧನೆಗೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, 2010ನೇ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ಸೇರಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿಗೂ ತಿಮ್ಮಕ್ಕ ಪಾತ್ರರಾಗಿದ್ದಾರೆ. ಸಾಲು ಮರದ ತಿಮ್ಮಕ್ಕ ನಿಧನಕ್ಕೆ ಸಿಎಂ -ಡಿಸಿಎಂ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

GKVK ಆವರಣದಲ್ಲಿ ಕೃಷಿ ಮೇಳ-2025ಕ್ಕೆ ಚಾಲನೆ ಐದು ಹೊಸ ಬೆಳೆ ತಂತ್ರಜ್ಞಾನ ಬಿಡುಗಡೆ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಆವರಣದಲ್ಲಿ ‘ಸಮೃದ್ಧ ಕೃಷಿ -ವಿಕಸಿತ ಭಾರತ ನೆಲ,ಜಲ ಮತ್ತು ಬೆಳೆ’ ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಿರುವ 4 ದಿನಗಳ ಕೃಷಿ ಮೇಳ 2025ಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಐದು ಹೊಸ ಬೆಳೆಗಳಾದ- CNGS-1 ರಾಗಿ, KBSH-88 ಸೂರ್ಯಕಾಂತಿ ಹೈಬ್ರಿಡ್, BISH-162 ಹತ್ತಿ ಹೈಬ್ರಿಡ್, CHNBT-1 ಕಪ್ಪು ಅರಿಶಿನ, ಮತ್ತು IISR ಪ್ರತಿಭಾ ಅರಿಶಿನ-36 ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ, ಕೃಷಿ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ ಮೂವರು ಪ್ರಗತಿಪರ ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

Belagavi: ಅಂತರರಾಷ್ಟ್ರೀಯ ಪ್ರಜೆಗಳಿಗೆ ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್ ಪತ್ತೆ; 33 ಮಂದಿ ಬಂಧನ

ಅಂತರರಾಷ್ಟ್ರೀಯ ಪ್ರಜೆಗಳಿಗೆ ವಂಚಿಸುತ್ತಿದ್ದ ಬೆಳಗಾವಿ ಮೂಲದ ನಕಲಿ ಕಾಲ್ ಸೆಂಟರ್ ಅನ್ನು ಪತ್ತೆಹಚ್ಚಿದ್ದು, 33 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ಮೂರು ದಿನಗಳ ಹಿಂದೆ ನೀಡಿದ ಸುಳಿವು ಮತ್ತು ಬುಧವಾರ ಅನುಮಾನಾಸ್ಪದ ಕೇಂದ್ರದ ಬಗ್ಗೆ ಹೆಚ್ಚುವರಿ ಅನಾಮಧೇಯ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾಲ್ ಸೆಂಟರ್ ಅಮೆರಿಕನ್ ನಾಗರಿಕರನ್ನು ಗುರಿಯಾಗಿಸಿಕೊಂಡು, ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ಜನರಿಗೆ ವಂಚಿಸಿ ಹಣ ವರ್ಗಾಯಿಸಿಕೊಳ್ಳುತ್ತಿತ್ತು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೋರ್ಸೆ ಭೂಷಣ್ ಗುಲಾಬ್ರಾವ್ ತಿಳಿಸಿದ್ದಾರೆ.

Mudhol: ಗೋದಾವರಿ ಕಾರ್ಖಾನೆ ಬಳಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ

ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಘೋಷಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಧೋಳ ತಾಲೂಕಿನ ಸೈದಾಪುರ ಗ್ರಾಮದ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಸಾಲಾಗಿ ನಿಲ್ಲಿಸಿದ್ದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಲಾಗಿದೆ. ಕಾರ್ಖಾನೆ ಮಾಲೀಕರು ಮಾತುಕತೆಗೆ ಬಾರದ ಕಾರಣ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ಘಟನೆ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿರುವ ಪ್ರಕರಣಕ್ಕೆ ರೈತರು ಕಾರಣರಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಸ್ಲಿಂ-ಯಾದವ್ RJD ತುಷ್ಠಿಕರಣಕ್ಕೆ ಬುದ್ಧಿ ಕಲಿಸಿದ್ದು ನಮ್ಮ ಮಹಿಳೆ-ಯುವಕರ M-Y ಸೂತ್ರ: ಪ್ರಧಾನಿ ಮೋದಿ

ಬಿಹಾರ ಚುನಾವಣೆಯಲ್ಲಿ ಅನ್ಯಾಯ; ಫಲಿತಾಂಶಗಳು ಆಘಾತಕಾರಿ: ಹೀನಾಯ ಸೋಲಿನ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ!

ಬಿಹಾರ ಸಿಎಂ ಗಾದಿಯಲ್ಲಿ ಮುಂದುವರೆಯುತ್ತಾರಾ ನಿತೀಶ್ ಕುಮಾರ್?: ಮೋದಿಯ ಹನುಮಾನ್ ಚಿರಾಗ್ ಪಾಸ್ವಾನ್ ಹೇಳಿದ್ದೇನು?

Bihar Election Results 2025: 'ಮಹಿಳೆಯರಿಗೆ 10 ಸಾವಿರ ರೂ'; ನಿತೀಶ್ ಕುಮಾರ್, NDA ಪ್ರಚಂಡ ಗೆಲುವಿಗೆ ಕಾರಣವಾದ ಅಂಶಗಳು

11 ಬೌಂಡರಿ, 15 ಸಿಕ್ಸರ್... 32 ಎಸೆತಗಳಲ್ಲಿ ಶತಕ: ರಿಷಬ್ ಪಂತ್ ದಾಖಲೆಗೇ ಕುತ್ತು ತಂದಿದ್ದ Vaibhav Suryavanshi!

SCROLL FOR NEXT