ಬೆಂಗಳೂರು: ಮೈಕ್ರೋಸಾಫ್ಟ್ ತಾಂತ್ರಿಕ ಬೆಂಬಲ ಸಿಬ್ಬಂದಿ ಹೆಸರಲ್ಲಿ ಅಮೆರಿಕದ ನಾಗರಿಕರನ್ನು ವಂಚಿಸುತ್ತಿದ್ದ ಬೆಂಗಳೂರು ಮೂಲದ 'ವಂಚನಾ ಸಾಫ್ಟ್‌ವೇರ್ ಕಂಪನಿ'ಯ ಇಪ್ಪತ್ತೊಂದು ಉದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಕಮಾಂಡ್‌ನ ವಿಶೇಷ ಕೋಶ ಮತ್ತು ವೈಟ್‌ಫೀಲ್ಡ್ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆ ಜಂಟಿ ಕಾರ್ಯಾಚರಣೆ ನಡೆಸಿತ್ತು.
ಮಾಹಿತಿಯ ಆಧಾರದ ಮೇಲೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಜಿಪಿ ಕಚೇರಿ ತಿಳಿಸಿದೆ. ಕಂಪನಿಯು ವಂಚನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ನಂತರ, ಶುಕ್ರವಾರ ಮತ್ತು ಶನಿವಾರ ವೈಟ್‌ಫೀಲ್ಡ್‌ನ "ವಂಚನಾ ಕಂಪನಿ" ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿ ದಾಳಿ ನಡೆಸಲಾಗಿತ್ತು.
ಮಸ್ಕ್ ಕಮ್ಯುನಿಕೇಷನ್ಸ್ ಎಂಬ ಕಂಪನಿಯು ಸುಮಾರು 4,500 ಚದರ ಅಡಿ ವಿಸ್ತೀರ್ಣದ ಕಚೇರಿಯಲ್ಲಿದ್ದು 2025ರ ಆಗಸ್ಟ್ ನಲ್ಲಿ ಪ್ರಾರಂಭವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಸೈಬರ್ ಕಮಾಂಡ್ ಘಟಕದ ಡಿಜಿಪಿ ಡಾ. ಪ್ರಣಬ್ ಮೊಹಂತಿ ಅವರ ಮಾರ್ಗದರ್ಶನದಲ್ಲಿ ಸೈಬರ್ ಕಮಾಂಡ್ ತಾಂತ್ರಿಕ ತಂಡ, ಸೈಬರ್ ಭದ್ರತಾ ವಿಶ್ಲೇಷಕರು ಮತ್ತು ನೆರೆಯ ಸೈಬರ್ ಅಪರಾಧ ಪೊಲೀಸ್ ಠಾಣೆಗಳ ಅಧಿಕಾರಿಗಳ ಬೆಂಬಲದೊಂದಿಗೆ ಕಾರ್ಯಾಚರಣೆಯನ್ನು ನಡೆಸಲಾಯಿತು.
ಕಾರ್ಯಾಚರಣೆಯ ಸಮಯದಲ್ಲಿ ಮೈಕ್ರೋಸಾಫ್ಟ್ ತಾಂತ್ರಿಕ ಸಿಬ್ಬಂದಿ ಹೆಸರಲ್ಲಿ ವಿದೇಶಿ ಪ್ರಜೆಗಳನ್ನು ವಂಚಿಸುವುದರಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ 21 ಉದ್ಯೋಗಿಗಳನ್ನು ವಶಕ್ಕೆ ಪಡೆದು ಬಂಧಿಸಲಾಯಿತು. ನವೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ಮುಕ್ತಾಯಗೊಂಡಿತ್ತು. ತೀವ್ರ ತಪಾಸಣೆಯ ನಂತರ ಅವರನ್ನು ಬಂಧಿಸಲಾಯಿತು ಎಂದರು. ಅಪರಾಧಕ್ಕೆ ಬಳಸುತ್ತಿದ್ದ ಹಲವಾರು ಕಂಪ್ಯೂಟರ್ ವ್ಯವಸ್ಥೆಗಳು, ಡಿಜಿಟಲ್ ಸಾಧನಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.