ಮಂಗಳೂರು: ಮಂಗಳೂರಿನಲ್ಲಿ ಬೀದಿನಾಯಿ ದಾಳಿಗೆ ವ್ಯಕ್ತಿಯೊಬ್ಬರು ಸಾವಿಗೀಡಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕುಂಪಲ ಗ್ರಾಮದ ನಿವಾಸಿ ದಯಾನಂದ (60) ಮೃತ ವ್ಯಕ್ತಿ. ಜನ ವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯರು ಕೊಲೆ ಎಂದು ಆತಂಕಕ್ಕೊಳಗಾಗಿದ್ದಾರೆ.
ಮೃತ ದಯಾನಂದ ಅವರ ದೇಹದ ಮೇಲೆ ರಕ್ತದ ಕಲೆಗಳು ಕಂಡು ಬಂದಿದ್ದು, ದೇಹದ ಮೇಲೆ ಆಳವಾದ ಗಾಯಗಳು, ಹಾಗೂ ಕಣ್ಣಿನ ಗುಡ್ಡೆ ಕಿತ್ತಿರುವುದು ಪತ್ತೆಯಾಗಿದೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಈ ನಡುವೆ ಸ್ಥಳಕ್ಕೆ ಭೇಟಿ ನೀಡಿದ ವಿಧಿವಿಜ್ಞಾನ ವೈದ್ಯರು, ಪ್ರಾಣಿಯ ದಾಳಿಯಿಂದ ವ್ಯಕ್ತಿಯ ಸಾವು ಸಂಭವಿಸಿದೆ ಎಂದು ದೃಢಪಡಿಸಿದ್ದಾರೆ.
ಈ ನಡುವೆ ಬಾಯಿಯ ಮೇಲೆ ರಕ್ತದೊಂದಿಗೆ ನಾಯಿ ಚಲಿಸುತ್ತಿರುವುದನ್ನು ಜನರು ನೋಡಿದ್ದು, ನಾಯಿಯ ದೇಹದ ಮೇಲೆ ರಕ್ತದ ಕಲೆಗಳಿರುವುದು ಪತ್ತೆಯಾಗಿದೆ.
ಮದ್ಯ ಸೇವಿಸಿದ ನಂತರ ದಯಾನಂದ್ ಅವರು, ಗುರುವಾರ ರಾತ್ರಿ NH66 ಕುಂಪಲ ಬೈಪಾಸ್ ರಸ್ತೆಯ ಎದುರಿನ ಲಾಂಡ್ರಿ ಅಂಗಡಿಯ ಬಳಿ ಮಲಗಿದ್ದರು. ಶುಕ್ರವಾರ ಮುಂಜಾನೆ ನಾಯಿ ದಾಳಿ ಮಾಡಿದ್ದು, ಮರುದಿನ ಬೆಳಿಗ್ಗೆ ಶವ ಅಂಗಡಿಯ ಬಳಿ ಮೃತದೇಹ ಪತ್ತೆಯಾಗಿದೆ. ದಯಾನಂದ್ ಪ್ರತಿದಿನ ಅಂಗಡಿಯ ಅಂಗಳದಲ್ಲಿ ಮಲಗುತ್ತಿದ್ದ ಎಂದು ಹಾಲಿನ ಬೂತ್ ಮಾಲೀಕರು ತಿಳಿಸಿದ್ದಾರೆ.
ಏತನ್ಮಧ್ಯೆ ವ್ಯಕ್ತಿಯನ್ನು ಕೊಂದ ನಾಯಿಯನ್ನು ಸೆರೆಹಿಡಿದಿರುವ ಅಧಿಕಾರಿಗು, ಶಕ್ತಿನಗರದಲ್ಲಿರುವ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ರವಾನಿಸಿದ್ದಾರೆ.
ಅಲ್ಲದೆ, ಮೃತ ವ್ಯಕ್ತಿಯ ರಕ್ತದ ಮಾದರಿಗಳು ಮತ್ತು ನಾಯಿಯ ಮೇಲಿನ ರಕ್ತದ ಕಲೆಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ನಾಯಿಗೆ ಹುಚ್ಚು ಹಿಡಿದಿದೆಯೇ ಎಂದು ದೃಢಪಡಿಸಲು ಪ್ರಯೋಗಾಲಯದ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಿಥುನ್ ಎಚ್ಎನ್ ಅವರು ತಿಳಿಸಿದ್ದಾರೆ. ಈ ಸಂಬಂಧ ಉಳ್ಳಾಲ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.